ಬೆಂಗಳೂರು: ಕಾಕ್ರೋಜ್ ಜನತಾ ಪಾರ್ಟಿ ಯಿಂದ ಭಾನುವಾರ ನಗರದ ಪುರಭವನದ ಮುಂಭಾಗದಲ್ಲಿ ನಡೆಸಲು ಉದ್ದೇಶಿಸಿರುವ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮ ಆಯೋಜನೆಗೆ ಮನವಿ ಬಂದಿಲ್ಲ. ಒಂದು ವೇಳೆ ಮನವಿ ಬಂದರೂ ಅನುಮತಿ ನೀಡುವುದಿಲ್ಲ ಎಂದು ನಗರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕಾಕ್ರೋಜ್ ಜನತಾ ಪಾರ್ಟಿಯಿಂದ ಟೌನ್ ಹಾಲ್ ಬಳಿ ಮಾನವ ಸರಪಳಿ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಟೌನ್ ಹಾಲ್ ಬಳಿ ಕಾರ್ಯಕ್ರಮ ಆಯೋಜನೆಗೆ ಯಾವುದೇ ವ್ಯಕ್ತಿ, ಸಂಘಟನೆ, ಪಕ್ಷದಿಂದ ಅನುಮತಿ ಕೋರಿರುವ ಯಾವುದೇ ಅರ್ಜಿಯನ್ನು ಸ್ವೀಕರಿಸಿಲ್ಲ. ಈ ಸಂಬಂಧ ಯಾವುದೇ ಅಧಿಕೃತ ಅನುಮತಿ ನೀಡಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಫ್ರೀಡಂ ಪಾರ್ಕ್ ಹೊರತುಪಡಿಸಿ, ಬೇರೆ ಯಾವುದೇ ಸ್ಥಳಗಳಲ್ಲಿ ಧರಣಿ, ಪ್ರತಿಭಟನಾ ಮೆರವಣಿಗೆ ನಡೆಸಲು ಅವಕಾಶ ಇಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಹೀಗಾಗಿ ಮನವಿ ಬಂದರೂ ಸಹ ಟೌನ್ ಹಾಲ್ ಬಳಿ ಅನುಮತಿ ನೀಡಲ್ಲ. ಒಂದು ವೇಳೆ ಇದನ್ನು ಉಲ್ಲಂಘಿಸಿ ಟೌನ್ ಹಾಲ್ ಮುಂಭಾಗ ಜನರು ಬಂದು ಸೇರುವುದು ನ್ಯಾಯಾಲಯ ಆದೇಶದ ಸ್ಪಷ್ಪ ಉಲ್ಲಂಘನೆಯಾಗಿರುತ್ತದೆ. ಹೀಗಾಗಿ ಜನರು ಟೌನ್ ಹಾಲ್ ಬಳಿ ಆಗಮಿಸಿ ಗುಂಪು ಸೇರಬಾರದು. ಅಲ್ಲದೇ ಸಾರ್ವಜನಿಕರು ಇಂತ ಪೋಸ್ಟ್ ಗಳನ್ನ ಹಂಚಿಕೊಳ್ಳಬಾರದು ಎಂದು ಸೂಚಿಸಿದ್ದಾರೆ.
ಪೋಸ್ಟ್ ವೈರಲ್:
ಯುವಕರಿಗೆ ಭವಿಷ್ಯವಿಲ್ಲ. ಬೆಲೆ ಏರಿಕೆಯಿಂದ ಬದುಕಿಲ್ಲ. ವಿದ್ಯಾರ್ಥಿಗಳಿಗೆ ನೀಟು ಪರೀಕ್ಷೆಇಲ್ಲ. ನಮ್ಮ ಮತ ಕದಿಯುತ್ತದ್ದಾರೆ. ಬನ್ನಿ ಕಾಕ್ರೋಜ್ ಗಳ ಸಂದೇಶ ನೀಡೋಣ. ಇಲ್ಲಿ ನಾಯಕರಿಲ್ಲ. ನಮಗೆ ನಾವೇ ನಾಯಕರು. ಇಲ್ಲಿ ಸಂಘಟನೆ ಇಲ್ಲ. ಪ್ರಜೆಗಳು ಕೈ ಜೋಡಿಸುವುದೇ ಸಂಘಟನೆ . ಬನ್ನಿ ಶಕ್ತಿ ಪ್ರದರ್ಶಿಸೋಣ. ಆತ್ಮ ವಂಚಕ ಆಡಳಿತಕ್ಕೆ ಸಂದೇಶ ರವಾನಿಸೋಣ. ಹೀಗಾಗಿ ಟೌನ್ಹಾಲ್ ಬಳಿ ಮೇ 24ರಂದು ಬೆಳಗ್ಗೆ 11ಗಂಟೆಗೆ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಎಂದು ಪೋಸ್ಟ್ ಮಾಡಲಾಗಿತ್ತು. ಆದ್ರೆ, ಇದೀಗ ಪೊಲೀಸರ ಖಡಕ್ ಸೂಚನೆ ಬೆನ್ನಲ್ಲೇ ಟೌನ್ ಹಾಲ್ ಸಭೆ ಮುಂದೂಡಲಾಗಿದೆ ಎಂದು ಪೋಸ್ಟ್ ಮಾಡಲಾಗಿದೆ.



