ಪಬ್ ನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಲ್ಲಿ ಇಬ್ಬರು ಕಾರ್ಮಿಕರು ಸಜೀವದಹನಗೊಂಡ ಭೀಕರ ಘಟನೆ ಮೈಸೂರಿನಲ್ಲಿ ಸೋಮವಾರ ಸಂಭವಿಸಿದೆ.
ಮೈಸೂರಿನ ರಿಂಗ್ ರಸ್ತೆಯ ಸಮೀಪದ ಫಾಕ್ಸ್ ಜೆನ್ ಪಬ್‌ನಲ್ಲಿಸೋಮವಾರ ಸಂಜೆ ಕಾಣಿಸಿಕೊಂಡ ಬೆಂಕಿ ಅನಾಹುತದಲ್ಲಿ ಸಾಹೀನ್ ಮತ್ತು ಪ್ರಕಾಶ್ ಎಂಬ ಇಬ್ಬರು ಸಜೀವ ದಹನಗೊಂಡಿದ್ದು, 7 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಟ್ಟಗಳ್ಳಿ 4ನೇ ಹಂತದ ಬಳಿ ಇರುವ ಸಿನಿಮಾ ನಟ ಪ್ರೀತಂ ಅವರಿಗೆ ಸೇರಿದ್ದು ಎನ್ನಲಾದ ಪಬ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದ ಸಮಯದಲ್ಲಿ ಪ್ರೀತಂ ಇದ್ದರು ಎಂದು ತಿಳಿದು ಬಂದಿದೆ.
ಅಂಬರೀಷ್, ರವಿಚಂದ್ರನ್ ಹಾಗೂ ಅನಂತ್ ನಾಗ್ ನಟಿಸಿದ್ದ ಬ್ರಹ್ಮ ವಿಷ್ಣು ಮಹೇಶ್ವರ ಚಿತ್ರದಲ್ಲಿ ಪ್ರೀತಂ ನಟಿಸಿದ್ದರು ಎಂದು ಹೇಳಲಾಗಿದೆ.
ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸಿ ಪಬ್ ಸಂಪೂರ್ಣ ಸುಟ್ಟು ಹೋಗಿದೆ. ಅವಘಡದಲ್ಲಿ ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.



