ಬೆಂಗಳೂರು: ಜೆಡಿಎಸ್ ಶಾಸಕರ ಸಭೆಯಲ್ಲಿ ಎಲ್ಲಾ 17 ಶಾಸಕರು ಹಾಜರಿದ್ದರು. ನಾವೆಲ್ಲರೂ ನಮ್ಮ ಅಭಿವೃದ್ಧಿಗೆ ಮತ ಹಾಕಿದ್ದೇವೆ ಎಂದು ಹೇಳಿದರು. ಹೀಗಾಗಿ ನಮ್ಮ ಪಕ್ಷದಲ್ಲಿ ಆಣೆ ಪ್ರಮಾಣದಿಂದ ಸಮಸ್ಯೆ ಬಗೆಯುವುದಿಲ್ಲ ಎಂಬುದು ನನ್ನ ನಂಬಿಕೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರನ್ನು ಪತ್ತೆಹಚ್ಚಲು ಬಿಜೆಪಿ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಲು ನಿರ್ಧರಿಸುವ ಬಗ್ಗೆ ಪ್ರಶ್ನಿಸಿದಾಗ ಕೇಂದ್ರ ಸಚಿವರು; ಅಡ್ಡ ಮತದಾನ ಎಂಬುದು ತುಂಬಾ ಬೇಸರದ ವಿಷಯ. ಯಾರು ಈ ರೀತಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬುದು ಧರ್ಮಸ್ಥಳದಲ್ಲಿ ಬೈಲಿಗೆ ಬರಬಹುದು. ಧರ್ಮಸ್ಥಳದಲ್ಲಿ ಸತ್ಯ ಹೊರಕ್ಕೆ ಬರುತ್ತದೆ ಎಂಬ ನಂಬಿಕೆ ಅವರಿಗೆ ಇದೆ ಎಂಬ ಉದ್ದೇಶದಿಂದ ಬಿಜೆಪಿ ನಾಯಕರು ಅಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿರಬಹುದು ಎಂದರು.
ನಗರದ ಪುಲಕೇಶಿ ನಗರದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಜೆಡಿಎಸ್ ಪಕ್ಷ ಸೇರ್ಪಡೆ ನಂತರ ಸಚಿವರು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ನಾನು ಶಾಸಕರಿಂದ ಆಣೆ ಪ್ರಮಾಣ ಮಾಡಿಸುವುದಿಲ್ಲ. ಎಲ್ಲವನ್ನು ಕಾಲವೇ ನಿರ್ಣಯಿಸುತ್ತದೆ ಎಂದು ನಂಬಿದ್ದೇವೆ. ಮುಂಬರುವ ಕಾಲಕ್ಕೆ ಇದೆಲ್ಲವನ್ನು ಬಿಡುವುದು ಒಳಿತು ಎಂಬುದಾಗಿ ನಮ್ಮ ಪಕ್ಷದಲ್ಲಿ ತೀರ್ಮಾನವಾಗಿದೆ ಎಂದರು ಕೇಂದ್ರ ಸಚಿವರು.
ಕುಮಾರಸ್ವಾಮಿ ಅವರು ಮುಂದಿನ ಮುಖ್ಯಮಂತ್ರಿ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು; ಅವರು ಪ್ರೀತಿ ವಿಶ್ವಾಸದಿಂದ ಈ ಮಾತು ಹೇಳಿದ್ದಾರೆ. ಆದರೆ ಉಸಿರು ಮೊದಲೇ ಕುಲಾವಿ ಹೊಲೆಸುವುದು ಬೇಡ ಎಂಬುದು ನನ್ನ ಅಭಿಪ್ರಾಯ. ಈಗಾಗಲೇ ಹಲವಾರು ಬಾರಿ ಹೇಳಿದ್ದೇನೆ. ನನಗೆ ಬೇಕಿರುವುದು ಕರ್ನಾಟಕದಲ್ಲಿ ಅತ್ಯುತ್ತಮ ಆಡಳಿತ ನೀಡುವ ಸರ್ಕಾರ ಬರುವಂತೆ ಮಾಡುವುದು. ಅದಕ್ಕಾಗಿ ನಾನು ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ತನ್ನ ಕೆಟ್ಟ ಆಡಳಿತದಿಂದ ರಾಜ್ಯದ ಮೇಲಿನ ಒಳ್ಳೆಯ ಅಭಿಪ್ರಾಯವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಅದನ್ನು ಸರಿಪಡಿಸುವ ಕೆಲಸ ಆಗಬೇಕಿದೆ. ರಾಜ್ಯದ ಗೌರವ ಪ್ರತಿಷ್ಠೆಗಳನ್ನು ಮರಳಿ ತರಬೇಕಿದೆ. ಇದು ನನ್ನ ಆದ್ಯತೆ, ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ದೇವರಿಗೆ ಮತ್ತು ನಾಡಿನ ಬಿಟ್ಟಿದ್ದು ಎಂದರು ಕೇಂದ್ರ ಸಚಿವರು.
ಮಾಜಿ ಮಂತ್ರಿ ಜಮೀರ್ ಅಹ್ಮದ್ ಸೇರಿದಂತೆ ಇನ್ನು ಅನೇಕ ನಾಯಕರು ಜೆಡಿಎಸ್ ಪಕ್ಷಕ್ಕೆ ಸೇರುತ್ತಾರೆ ಎನ್ನುವ ಸುದ್ದಿ ಇದೆಯಲ್ಲ ಎನ್ನುವ ಪ್ರಶ್ನೆಗೆ, ಈ ಬಗ್ಗೆ ನಾನು ಏನು ಹೇಳಲಾರೆ. ಮುಂದೆ ಯಾರು ಮುಖ್ಯಮಂತ್ರಿ ಆಗಬೇಕು, ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದನ್ನು ಜನತೆ ತೀರ್ಮಾನಿಸುತ್ತಾರೆ. ತಮಿಳುನಾಡಿನಲ್ಲಿ ಚಿತ್ರನಟ ವಿಜಯ್ ಅವರು ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಆಗುತ್ತಾರೆ ಎಂದು ಯಾರಾದರೂ ಪೂಜೆ ಮಾಡಿದ್ದರೆ? ಈ ಕೆಟ್ಟ ಸರ್ಕಾರದಿಂದ ರೋಸಿ ಹೋಗಿರುವ ರಾಜ್ಯದಲ್ಲಿ ರಾಜ್ಯದ ಜನರು ಬದಲಾವಣೆ ಬರುತ್ತಾರೆ ಎಂದು ನಂಬಿದ್ದೇನೆ ಎಂದರು ಕುಮಾರಸ್ವಾಮಿ ಅವರು.
ವಿಧಾನ ಪರಿಷತ್ ಚುನಾವಣೆ ಮುಗಿದ ನಂತರ ನೀವು ರಾಜರಾಜಕಾರಕ್ಕೆ ಬರುತ್ತೀರಿ ಎನ್ನುವ ಮಾತು ಹೆಚ್ಚಾಗಿ ಕೇಳಿಬರುತ್ತದೆ ಇನ್ನು ಪ್ರಶ್ನೆಗೆ, ನಾನು ರಾಜ್ಯ ರಾಜಕಾರಣದಲ್ಲಿ ಇದ್ದೀನಿ. ದೆಹಲಿಯಲ್ಲಿ ಇಲಾಖೆಗಳ ಕೆಲಸ ಮಾಡಬೇಕಿದೆ. ಜೊತೆಗೆ ಪಕ್ಷದ ಸಂಘಟನೆಯನ್ನು ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿ ಸಮಯ ಮೀಸಲು ಇಡುತ್ತೇನೆ. ತಿಂಗಳಿಗೆ 15 ದಿನ ರಾಜ್ಯದ ಜನರಿಗೆ ಈ ಸರ್ಕಾರದ ಆಡಳಿತದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ ಎಂದರು.



