15ರ ಬಾಲಕ ವೈಭವ್ ಸೂರ್ಯವಂಶಿ ಅವರ ಮಿಂಚಿನಾಟದಿಂದ ಭಾರತ ತಂಡ 66 ರನ್ ಗಳಿಂದ ಶ್ರೀಲಂಕಾ ಎ ತಂಡವನ್ನು ಮಣಿಸಿ ತ್ರಿಕೋನ ಏಕದಿನ ಸರಣಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಡಂಬುಲಾದಲ್ಲಿ ಭಾನುವಾರ ನಡೆದ ಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 377 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಶ್ರೀಲಂಕಾ ಎ ತಂಡ 47.1 ಓವರ್ ಗಳಲ್ಲಿ 311 ರನ್ ಗಳಿಗೆ ಆಲೌಟಾಯಿತು.
ಕಳೆದ ಪಂದ್ಯದಲ್ಲಿ ಇದು ಐಪಿಎಲ್ ಅಲ್ಲ ಮಗು ಎಂದು ನಿಂದಿಸಿದ್ದ ಆಟಗಾರರಿಗೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ಗಮನ ಸೆಳೆದರು.
ಕೇವಲ 11 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದ ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ 94 ರನ್ ಚಚ್ಚಿದರು. ಆದರೆ ಆರ್ಚ್ ಚಿಂಗೆ ಎಸೆತದಲ್ಲಿ ಔಟಾಗಿ 6 ರನ್ ನಿಂದ ಶತಕ ವಂಚಿತರಾದರು.
ವೈಭವ್ ಮತ್ತು ಪ್ರಿಯಾಂಕ್ ಆರ್ಯ ಮೊದಲ ವಿಕೆಟ್ ಗೆ 8.5 ಓವರ್ ಗಳಲ್ಲಿ 132 ರನ್ ಜೊತೆಯಾಟ ನಿಭಾಯಿಸಿದರೆ ಇದರಲ್ಲಿ ಪ್ರಿಯಾಂಕ್ ಕೊಡುಗೆ ಕೇವಲ 39 ಆಗಿತ್ತು.
ನಂತರ ತಿಲಕ್ ವರ್ಮಾ 90 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 67 ರನ್ ಬಾರಿಸಿ ಅರ್ಧಶತಕದ ಗೌರವಕ್ಕೆ ಪಾತ್ರರಾದರು. ಋತುರಾಜ್ ಗಾಯಕ್ವಾಡ್ (40), ಕುಮಾರ್ ಕುಶಾಗ್ರಾ (36), ಅಂಕುಲ್ ರಾಯ್ (39) ತಂಡದ ಮೊತ್ತ 350ರ ಗಡಿ ದಾಟಿಸಿದರು.
ಕುಸಿದ ಲಂಕೆ
ಕಠಿಣ ಗುರಿ ಬೆಂಬತ್ತಿದ ಶ್ರೀಲಂಕಾ ಆರಂಭದಲ್ಲೇ ಮುಗ್ಗರಿಸಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸಧೀರ ಸಮರವೀರ (52) ಮತ್ತು ವನುಜಾ ಸಹಾನ್ (62) ಅರ್ಧಶತಕ ಬಾರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.
ನಾಯಕ ಸಹಾನ್ ಅರ್ಚ್ ಚಿಂಗೆ (38), ವಿಜಯಕಾಂತ್ (39), ಮೊಹಮದ್ ಶರೀಫ್ (19) ಹೋರಾಟ ನಡೆಸಿ ತಂಡದ ಮೊತ್ತವನ್ನು 300 ದಾಟಿಸಿದರೂ ಗುರಿ ತಲುಪಿಸುವಲ್ಲಿ ಎಡವಿದರು.
ಭಾರತದ ಪರ ಯಶ್ ಥಾಕೂರ್ , ವಿಪ್ರಾಜ್ ನಿಗಮ್ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಅಂಕುಲ್ ರಾಯ್ 2 ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ ಎ 50 ಓವರ್ 9 ವಿಕೆಟ್ ಗೆ 377 (ವೈಭವ್ ಸೂರ್ಯವಂಶಿ 94, ತಿಲಕ್ ವರ್ಮಾ, 67, ಋತುರಾಜ್ ಗಾಯಕ್ವಾಡ್ 40, ಅಂಕುಲ್ ರಾಯ್ 39, ಪ್ರಿಯಾಂಶ್ ಆರ್ಯ 39, ಕುಮಾರ್ ಕುಶಾಗ್ರಾ 36, ವನುಜಾ ಸಹಾನ್ 39/2, ರವಿಂದು ಫೆರ್ನಾಂಡೊ 72/2, ಕುಗತಾಸ್ ಮಥುಲನ್ 82/2).
ಶ್ರೀಲಂಕಾ ಎ 47.1 ಓವರ್ 311 (ವನುಜಾ ಸಹಾನ್ 62, ಸಧೀರ ಸಮರವಿಕ್ರಮ 52, ಸಹಾನ್ ಅರ್ಚ್ ಚಿಂಗೆ 38, ವಿಜಯಕಾಂತ್ 39, ಮೊಹಮದ್ ಶರೀಫ್ 19, ಯಶ್ ಥಾಕೂರ್45/3, ವಿಪ್ರಾಜ್ ನಿಗಮ್ ತಲಾ 60/3)



