ಮೂರು ಬಾರಿಯ ಏಷ್ಯನ್ ಪ್ಯಾರಾ ಗೇಮ್ಸ್ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದ ಶಾಟ್ ಪುಟ್, ಜಾವೆಲಿನ್ ಮತ್ತು ಡಿಸ್ಕಸ್ ಸ್ಪರ್ಧಿ ನೀರಜ್ ಯಾದವ್ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಪ್ಯಾರಾ ಅಥ್ಲೀಟಿಕ್ ಕೋಚ್ ಎಸ್. ಸತ್ಯಾನಾರಾಯಣ ಈ ವಿಷಯವನ್ನು ದೃಢಪಡಿಸಿದ್ದು, ಮೃತದೇಹವನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ನಂತರ ವಿಷಯ ದೃಢಪಡಲಿದೆ.
ನೀರಜ್ ಅವರ ಕುಟುಂಬದ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೆ. ಆದರೆ ಇಂದು ಕರೆ ಮಾಡಿದಾಗ ಆತ ಇನ್ನಿಲ್ಲ ಎಂಬ ಸುದ್ದಿ ತಿಳಿದು ಆಘಾತವಾಯಿತು. ಕ್ರೀಡಾಪಟುಗಳು ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಏನಾಗಿದೆ ಎಂಬುದು ನಮಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಾಗಿದೆ ಎಂದು ಸತ್ಯಾನಾರಾಯಣ ಹೇಳಿದ್ದಾರೆ.
ಉತ್ತರ ಪ್ರದೇಶ ಮೂಲದ ನೀರಜ್ ಯಾದವ್ ಗೆ ೪೨ ವರ್ಷ ವಯಸ್ಸಾಗಿತ್ತು. 2018ರಲ್ಲಿ ಜಾವೆಲಿನ್ ಎಸೆತದಲ್ಲಿ ಜಕಾರ್ತ ಏಷ್ಯನ್ ಗೇಮ್ಸ್ ಮತ್ತು 2022ರ ಹಂಗುಜ್ಞು ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೇ ಹಂಗುಜುನಲ್ಲಿ ಡಿಸ್ಕಸ್ ಎಸೆತದಲ್ಲೂ ಚಿನ್ನದ ಪದಕ ಗೆದ್ದು ಅಪರೂಪದ ಸಾಧನೆ ಮಾಡಿದ್ದರು. ಜಾವೆಲಿನ್ ಡಿಸ್ಕಸ್ ಮತ್ತು ಶಾಟ್ ಪುಟ್ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧಿಸಿದ್ದ ನೀರಜ್ ಅಕಾಲಿಕ ಸಾವಿಗೆ ಕ್ರೀಡಾಕ್ಷೇತ್ರ ಆಘಾತಕ್ಕೆ ಒಳಗಾಗಿದೆ.
