ಬೆಂಗಳೂರು: ರಾಜಕಾಲುವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣವನ್ನು ಬೇಧಿಸಿರುವ ಮಾಗಡಿ ರಸ್ತೆ ಠಾಣೆ ಪೊಲೀಸರು ಪತ್ನಿಯನ್ನು ಕೊಲೆ ಮಾಡಿದ್ದ ಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಹಾರ ಮೂಲದ ಪತ್ನಿ ರುಕ್ಸಾನಾ (25)ಳನ್ನು ಕೊಲೆಗೈದಿದ್ದ ಪತಿ ಮೊಹಮ್ಮದ್ ಇರ್ಫಾಜ್ ಬಂಧಿತ ಆರೋಪಿಯಾಗಿದ್ದು,ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಆಕೆಯನ್ನು ಕೊಲೆ ಮಾಡಿ ಮೃತದೇಹವನ್ನು ರಾಜಕಾಲುವೆಗೆ ಎಸೆದಿರುವುದನ್ನು ಬಾಯ್ಬಿಟ್ಟಿದ್ದಾನೆ.
ಕಳೆದ ಅ. 13ರಂದು ಮಾಗಡಿ ರಸ್ತೆ ಬಳಿಯ ರಾಜಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಮೃತಳ ಗುರುತು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಸತ್ಯಾಂಶ ಬಯಲಾಗಿದೆ. ರುಕ್ಸಾನಾ ಮತ್ತು ಮೊಹಮ್ಮದ್ ಇರ್ಫಾಜ್ ಇಬ್ಬರೂ ಬಿಹಾರ ಮೂಲದವರಾಗಿದ್ದು, ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ರುಕ್ಸಾನಾಗೆ ಈ ಹಿಂದೆ ಮದುವೆಯಾಗಿದ್ದು, ಒಂದು ಮಗುವೂ ಇತ್ತು.
ಬಲೂನ್ ಮಾರಾಟ:
ಮೊದಲ ಪತಿಯಿಂದ ದೂರವಾಗಿದ್ದ ಆಕೆಗೆ ಬಿಹಾರದಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಇರ್ಫಾಜ್ ಪರಿಚಯವಾಗಿ ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದು ಮದುವೆಯಾಗಿದ್ದರು. ಸುಮಾರು ಆರು ತಿಂಗಳ ಹಿಂದೆ ದಂಪತಿ ನಗರಕ್ಕೆ ಉದ್ಯೋಗ ಅರಸಿ ಬಂದಿದ್ದರು. ಇರ್ಫಾಜ್ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆ, ರುಕ್ಸಾನಾ ಕೂಡ ಕೆಲಸ ಮಾಡುತ್ತಿದ್ದಳು.
ಈ ನಡುವೆ ರುಕ್ಸಾನಾ ಆಗಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದುದನ್ನು ಕಂಡು, ಆಕೆ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಇರ್ಫಾಜ್ ಅನುಮಾನಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಕಲ್ಲಿನಿಂದ ಹೊಡೆದು ಕೊಲೆ:
ಅಕ್ಟೋಬರ್ 10ರಂದು ದಂಪತಿ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ಇರ್ಫಾಜ್ ಕಲ್ಲಿನಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿ ಬಳಿಕ ಆಕೆಯ ಬಾಯಿಗೆ ವೇಲ್ ತುರುಕಿದ್ದಾನೆ. ನಂತರ ಮೃತದೇಹವನ್ನು ಸಾಗಿಸಲು ಅಪರಿಚಿತ ವ್ಯಕ್ತಿಯೊಬ್ಬರ ಬೈಕ್‌ನ ಹ್ಯಾಂಡ್‌ಲಾಕ್ ಮುರಿದು ಬಳಸಿಕೊಂಡಿದ್ದಾನೆ.
ಮೃತದೇಹವನ್ನು ಚೀಲದಲ್ಲಿ ಇರಿಸಿ, ಬೈಕ್‌ನ ಮಧ್ಯಭಾಗದಲ್ಲಿಟ್ಟುಕೊಂಡು ತಳ್ಳಿಕೊಂಡು ಹೋಗಿದ್ದಾನೆ. ಬಳಿಕ ರಾಜಕಾಲುವೆಗೆ ಮೃತದೇಹವನ್ನು ಎಸೆದು ಸ್ಥಳದಿಂದ ಪರಾರಿಯಾಗಿದ್ದ ಎಂದು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ತಿಳಿಸಿದ್ದಾರೆ.
10 ತಂಡಗಳಿಂದ ಶೋಧ:
ಅಕ್ಟೋಬರ್ 13ರಂದು ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಕಾಲುವೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಆದರೆ, ಮೃತಳ ಗುರುತು ಹಾಗೂ ಕೊಲೆಗೆ ಸಂಬಂಧಿಸಿದ ಸುಳಿವುಗಳು ಆರಂಭದಲ್ಲಿ ಪೊಲೀಸರಿಗೆ ಲಭ್ಯವಾಗಿರಲಿಲ್ಲ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹತ್ತಕ್ಕೂ ಹೆಚ್ಚು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದರು. ಮನೆಮನೆಗೆ ತೆರಳಿ ಪರಿಶೀಲನೆ ನಡೆಸುವುದರ ಜತೆಗೆ, ಕಾಣೆಯಾದ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಗೋಪಾಲಪುರದ ವ್ಯಕ್ತಿಯೊಬ್ಬನ ಪತ್ನೆ ಕಾಣೆಯಾಗಿರುವ ಬಗ್ಗೆ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಸುಳಿವಿನ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಮೊಹಮ್ಮದ್ ಇರ್ಫಾಜ್‌ನನ್ನು ವಿಚಾರಣೆಗೆ ಒಳಪಡಿಸಿದ್ದರು.
ಸುಳ್ಳು ಹೇಳಿದ್ದ ಆರೋಪಿ:
ವಿಚಾರಣೆ ವೇಳೆ ಇರ್ಫಾಜ್ ತನ್ನ ಪತ್ನಿ ಬಿಹಾರದಲ್ಲಿರುವ ಸ್ವಗ್ರಾಮಕ್ಕೆ ಹೋಗಿದ್ದಾಳೆ ಹಾಗೂ ಆಕೆ ಮೊಬೈಲ್ ಬಳಸುತ್ತಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದ ಎನ್ನಲಾಗಿದೆ. ಆದರೆ, ಆತನ ಹೇಳಿಕೆಗಳ ಬಗ್ಗೆ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಪ್ರಕರಣವನ್ನು ಭೇದಿಸಿರುವ ಮಾಗಡಿ ರಸ್ತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



