Wednesday, July 1, 2026
Google search engine
Homeರಾಜ್ಯಕೈ ಕೊಟ್ಟ ಮುಂಗಾರು: ಪ್ರತೀ ಜಿಲ್ಲೆಗೆ 5 ಕೋಟಿ ರೂ. ಪರಿಹಾರ ಘೋಷಣೆ

ಕೈ ಕೊಟ್ಟ ಮುಂಗಾರು: ಪ್ರತೀ ಜಿಲ್ಲೆಗೆ 5 ಕೋಟಿ ರೂ. ಪರಿಹಾರ ಘೋಷಣೆ

ಬೆಳಗಾವಿ: ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ ಎಂದು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ವ್ಯಾಪ್ತಿಯ 7 ಜಿಲ್ಲೆಗಳ ಜ್ವಲಂತ ಸಮಸ್ಯೆಗಳ ಕುರಿತು ಸುದೀರ್ಘ ಪರಿಶೀಲನೆ ನಡೆಸಲಾಗಿದೆ. ಮೋಡ ಬಿತ್ತನೆ ಕುರಿತ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದರು.

ಇದೇ ಮೊದಲ ಬಾರಿಗೆ ಎಲ್ಲಾ 7 ಜಿಲ್ಲೆಗಳ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು  ಹಾಗೂ ಉಪವಿಭಾಗಾಧಿಕಾರಿಗಳ  ಜಂಟಿ ಸಭೆ ನಡೆಸಿ ಮಳೆ ಕೊರತೆ, ಕುಡಿಯುವ ನೀರಿನ ಸಮಸ್ಯೆ, ಬೆಳೆ ನಾಶ ಹಾಗೂ ಬಿತ್ತನೆ ಕಾರ್ಯದ ಪ್ರಗತಿ ಕುರಿತು ಸಮಗ್ರ ಆಡಳಿತಾತ್ಮಕ ಪರಾಮರ್ಶೆ ನಡೆಸಲಾಗಿದೆ ಎಂದು ಸಚಿವರು ವಿವರಿಸಿದರು.

ಜೂನ್‌ನಲ್ಲಿ ಶೇ. 30ರಷ್ಟು ಮಾತ್ರ ಮಳೆ

“ಜೂನ್ ತಿಂಗಳಿನಲ್ಲಿ ಕೇವಲ ಶೇ. 30ರಷ್ಟು ಮಾತ್ರ ಮಳೆಯಾಗಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಆತಂಕಕಾರಿಯಾಗಿ ಕುಸಿದಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಈಗಾಗಲೇ ತುರ್ತು ‘ಕ್ರಿಯಾ ಯೋಜನೆ’ ರೂಪಿಸಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪ್ರತಿ ಜಿಲ್ಲೆಗೆ ತಲಾ 5 ಕೋಟಿ ರೂಪಾಯಿಗಳ ವಿಶೇಷ ನಿಧಿಯನ್ನು ಬಿಡುಗಡೆ ಮಾಡಲಾಗಿದೆ,” ಎಂದು ಡಾ. ಜಿ. ಪರಮೇಶ್ವರ್ ಹೇಳಿದರು. ಇದೇ ವೇಳೆ, ಯಾವುದೇ ಕಾರಣಕ್ಕೂ ಯಾರದ್ದೇ ಪ್ರಭಾವ ಅಥವಾ ಲಾಬಿಗೆ ಮಣಿದು ಜಲಾಶಯಗಳಿಂದ ಅನಗತ್ಯವಾಗಿ ನೀರು ಬಿಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದರು.

ಕೇಂದ್ರದ ವಿರುದ್ಧ ಅಸಮಾಧಾನ

ರಾಜ್ಯದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಎನ್.ಡಿ.ಆರ್.ಎಫ್  ನಿಯಮಾವಳಿಗಳ ಪ್ರಕಾರ ಕೇಂದ್ರ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿಂದೆ ನಾವು ನೀಡಿದ ವಸ್ತುಸ್ಥಿತಿ ವರದಿಗಳನ್ನು ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳದೆ ನಿರ್ಲಕ್ಷಿಸಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.

ಕ್ರೀಡೆಗೆ ಉತ್ತೇಜನ

ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಶಾಲಾ-ಕಾಲೇಜು ಮಟ್ಟದಲ್ಲಿ ಗುಣಮಟ್ಟದ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 72,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸಿಇಟಿ ಮೂಲಕ ನಡೆಯುವ ಈ ನೇಮಕಾತಿಗಳಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಕ್ರೀಡಾ ಮೀಸಲಾತಿ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಪ್ರಕಟಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments