ಒಂದು ಬಾರಿ ಶಾಸಕಿ, ನಾಲ್ಕು ಬಾರಿಯ ಸಂಸದೆ ಹಾಗೂ ಒಂದು ಬಾರಿ ಕೇಂದ್ರ ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದ ಸೂರ್ಯಕಾಂತ ಪಾಟೀಲ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಬಿಜೆಪಿಗೆ ಇದೀಗ ಮತ್ತೊಂದು ಆಘಾತ ಉಂಟಾಗಿದ್ದು, ಸೂರ್ಯಕಾಂತ ಪಾಟೀಲ್ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
2014ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಸೂರ್ಯಕಾಂತ ಪಾಟೀಲ್, ಕಳೆದ 10 ವರ್ಷಗಳಲ್ಲಿ ಸಾಕಷ್ಟು ಹೊಸ ವಿಷಯ ಕಲಿತಿದ್ದೇನೆ. ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ.
ಬಿಜೆಪಿ ತೊರೆದ ಸೂರ್ಯಕಾಂತ ಪಾಟೀಲ್ ಶೀಘ್ರದಲ್ಲೇ ಶರದ್ ಪವಾರ್ ನೇತೃತ್ವದ ಎನ್ ಸಿಪಿ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರದ ಹಿಂಗೋಲಿ ಕ್ಷೇತ್ರವನ್ನು ಈ ಹಿಂದೆ ಪ್ರತಿನಿಧಿಸಿದ್ದ ಸೂರ್ಯಕಾಂತ ಪಾಟೀಲ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಬಿಜೆಪಿ ಟಿಕೆಟ್ ಸಿಗದ ಕಾರಣ ಸೂರ್ಯಕಾಂತ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.