ಸರ್ಕಾರಿ ಉದ್ಯೋಗ ಹಾಗೂ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ತಾಯಿ ಕೊಲೆಗೆ ಮಗಳೇ ಸುಪಾರಿ ನೀಡಿದ ಆಘಾತಕಾರಿ ಘಟನೆ ಜೈಪುರದಲ್ಲಿ ನಡೆದಿದೆ.
23 ವರ್ಷದ ಆಯುಷಿ ಶರ್ಮ ಹಾಗೂ ಅಂಕಲ್ ಹಾಗೂ ಸಂಬಂಧಿ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು ಎಂಬುದು ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.
ಸ್ಕಾರ್ಪಿಯೊ ಕಾರು ಹತ್ತಿಸಿ 45 ವರ್ಷದ ತಾಯಿ ನೀರಜಾ ಶರ್ಮ ಅವರನ್ನು ಕೊಂದು ರಸ್ತೆ ಅಪಘಾತ ಎಂದು ಬಿಂಬಿಸಲು ಆಯುಷಿ ಶರ್ಮ 7 ಲಕ್ಷ ರೂ. ಸುಪಾರಿ ನೀಡಿದ್ದಳು.
ಕೆಳ ಹಂತದ ನ್ಯಾಯಾಲಯದಲ್ಲಿ ಕೆಳ ಹಂತದ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ನೀರಜಾ ಅವರನ್ನು ಜುಲೈ ೩ರಂದು ಪ್ರತಾಪ್ ನಗರ ಪ್ರದೇಶದಲ್ಲಿ ಅಪಘಾತ ನಡೆಸಿ ಹತ್ಯೆ ನಡೆಸಲಾಗಿತ್ತು.
ಮಗನನ್ನು ಕೋಚಿಂಗ್ ಶಾಲೆಗೆ ಬಿಟ್ಟು ಮರಳುತ್ತಿದ್ದ ನೀರಜಾ ಅವರನ್ನು 130 ಕಿ.ಮೀ. ವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿತ್ತು. ಕಾರು ಹೊಡೆದ ರಭಸಕ್ಕೆ ಆಕೆ 100 ಅಡಿ ಹಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದ.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಆಕಸ್ಮಿಕ ಅಪಘಾತದಂತೆ ಭಾಸವಾಗದ ಕಾರಣ ತನಿಖೆ ಆರಂಭಿಸಿದಾಗ ಇದರ ಹಿಂದಿನ ಸೂತ್ರಧಾರಿ ಮಗಳು ಆಯುಷಿ ಹಾಗೂ ಕುಟುಂಬದ ಸದಸ್ಯರೇ ಕಾರಣ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ನೀರಜಾ ಅವರ ತಂದೆ ಹಲವು ವರ್ಷಗಳ ಹಿಂದೆ ತೀರಿಸಿಕೊಂಡಿದ್ದು, ಅನುಕಂಪದ ಆಧಾರದ ಮೇಲೆ ಪತ್ನಿ ನೀರಜಾಗೆ ಉದ್ಯೋಗ ದೊರೆತಿತ್ತು. ತಂದೆ ಸಾವಿನಿಂದ ನನಗೆ ಉದ್ಯೋಗ ದೊರೆಯುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಆಯುಷಿಗೆ ಆಘಾತವಾಗಿತ್ತು. ಅಲ್ಲದೇ ಸ್ವತಃ ತಾಯಿಯೇ ಕೆಲಸಕ್ಕೆ ಸೇರಿದ್ದರಿಂದ ಬೇಸರಗೊಂಡಿದ್ದು, ಆಸ್ತಿ ವಿಷಯಕ್ಕೆ ಕಳೆದ ಮೂರು ವರ್ಷಗಳಿಂದ ತಾಯಿ ಜೊತೆ ಪದೇಪದೆ ಜಗಳ ಮಾಡುತ್ತಿದ್ದಳು.
ಮಗ ರಾಕೇಶ್ ಶರ್ಮ ಈ ಹಿಂದೆ ಮಗಳು ಅಮ್ಮನಿಗೆ ಹಿಂಸೆ ನೀಡುತ್ತಿದ್ದಾಳೆ ಎಂದು ದೂರು ನೀಡಿದ್ದ. ಈ ಎಲ್ಲಾ ಅಂಶಗಳು ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ಮಗಳೇ ಸರ್ಕಾರಿ ಉದ್ಯೋಗ ಹಾಗೂ ಆಸ್ತಿ ಮೇಲೆ ಹಿಡಿತ ಸಾಧಿಸಲು ಸಂಚು ರೂಪಿಸಿದ್ದನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.



