Tuesday, July 7, 2026
Google search engine
Homeಅಪರಾಧಬಿಟ್ ಕಾಯಿನ್ ಹಗರಣ: 3,500 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ

ಬಿಟ್ ಕಾಯಿನ್ ಹಗರಣ: 3,500 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ

ಬೆಂಗಳೂರು:ಬಿಟ್ ಕಾಯಿನ್ ಬಹುಕೋಟಿ ಹಗರಣ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಪ್ರಮುಖ ಆರೋಪಿ ಶ್ರೀಕೃಷ್ಣ ರಮೇಶ್ ಆಲಿಯಾಸ್ ಶ್ರೀಕಿ ಸೇರಿ ಮೂವರು ವಿರುದ್ದ 3,500 ಪುಟಗಳ ಚಾರ್ಜ್​ಶೀಟ್ ನ್ನು ನಗರದ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಪ್ರಕರಣದ ಕೇಂದ್ರ ಬಿಂದುವಾಗಿರುವ ಶ್ರೀಕಿ, ಉದ್ಯಮಿ ಸುನೀಶ್ ಹೆಗ್ಡೆ ಹಾಗೂ ಕ್ರಿಪ್ಟೋ ಕರೆನ್ಸಿ ವ್ಯಾಪಾರಿ ರಾಬಿನ್ ಖಂಡೇವಾಲಾ ಖಾಸಗಿ ಕಂಪನಿ ಹಾಗೂ ಇನ್ನಿಬ್ಬರ ವಿರುದ್ಧ 3,500 ಪುಟಗಳ ದೋಷಾರೋಪ ಪಟ್ಟಿಯನ್ನು ನಗರದ ಪಿಎಂಎಲ್ ವಿಶೇಷ ನ್ಯಾಯಾಲಯಕ್ಕೆ ಅಧಿಕಾರಿಗಳು ಸಲ್ಲಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಸಂಬಂಧ ಕಳೆದ ಮೇ ತಿಂಗಳಲ್ಲಿ ಇಡಿ ದಾಳಿ ನಡೆಸಿ ಶ್ರೀಕಿ, ಸುನೀಶ್ ಹೆಗ್ಡೆ ಹಾಗೂ ರಾಬಿನ್ ಖಂಡೇವಾಲಾ ಅವರನ್ನು ಬಂಧಿಸಿದ್ದು,ಇವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಆಗಿರುವ ಶ್ರೀಕಿ, ಆನ್​ಲೈನ್ ಗೇಮಿಂಗ್ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡುವ ಕಲೆ ಸಿದ್ದಿಸಿಕೊಂಡಿದ್ದ. ಕರ್ನಾಟಕ ಸರ್ಕಾರ ಇ – ಪ್ರೊಕ್ಯೂರ್ ಮೆಂಟ್ ಜಾಲತಾಣವನ್ನು ಹ್ಯಾಕ್ ಮಾಡಿ 11.5 ಕೋಟಿ ಲಪಾಟಿಯಿಸಿದ್ದ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ರಾಜಕೀಯ ನಂಟು ಹೊಂದಿರುವ ಉದ್ಯಮಿ ಹಾಗೂ ಗುತ್ತಿಗೆದಾರ ಸುನೀಶ್ ಹೆಗ್ಡೆ, ಶ್ರೀಕಿಯ ಐಷರಾಮಿ ಜೀವನಕ್ಕೆ ಹಣಕಾಸಿನ ನೆರವು ಒದಗಿಸಿದ್ದ. ಆನ್​ಲೈನ್ ಗೇಮಿಂಗ್ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡುವಂತೆ ಒತ್ತಾಯಿಸಿದ್ದ. ಆನ್​​ಲೈನ್​ನಲ್ಲಿ ಸುಲಿಗೆ ಮಾಡಲು ಯೋಜಿಸಿದ್ದ. ಗೇಮಿಂಗ್ ಆ್ಯಪ್ ಹ್ಯಾಕ್ ಮಾಡಿಸುತ್ತಿದ್ದ. ಹ್ಯಾಕ್ ಆದ ಕಂಪನಿಗಳಿಂದ ಮಾತುಕತೆ ನಡೆಸಿ 2 ಕೋಟಿ ಹಣ ಹಾಗೂ ಕ್ಯಾಸಿನೋ ಚಿಪ್​ಗಳು, ವರ್ಚುಯಲ್ ಸ್ವತ್ತುಗಳಿಗೆ ಬೇಡಿಕೆ ಇರಿಸಿದ್ದ ಎಂದು ತನಿಖಾ ವರದಿಯಲ್ಲಿ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಕ್ರಿಪ್ಟೋ ಕರೆನ್ಸಿ ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದ ಆರೋಪಿ ರಾಬಿನ್ ವಾಲಾ, ಶ್ರೀಕಿ ಹಾಗೂ ಸುನೀಶ್ ಹೆಗ್ಡೆ ಅವರಿಂದ ವರ್ಚುಯಲ್ ಮೂಲಕ ಕದ್ದ ಬಿಟ್ ಕಾಯಿನ್​ಗಳನ್ನು ಕ್ರಿಪ್ಟೋ ಮೂಲಕ ಖರೀದಿಸಿ ನಗದುಗೊಳಿಸಿದ್ದ ಹಣವನ್ನು ಶ್ರೀಕಿ ಗ್ಯಾಂಗ್ ಅನ್ನು ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತಿದ್ದ ಎಂದು ವರದಿಯಲ್ಲಿ ತಿಳಿಸಿದೆ.

ಪ್ರಕರಣ ಹಿನ್ನೆಲೆ:

2017ರಂದು ಆರೋಪಿ ಶ್ರೀಕೃಷ್ಣ ಆ್ಯಂಡ್ ಗ್ಯಾಂಗ್ ಯುನಿಕಾನ್ ಕ್ರಿಪ್ಟೊ ಎಕ್ಸ್​ಚೇಂಜ್​ನಲ್ಲಿ 60 ಬಿಟ್ ಕಾಯಿನ್ ಹ್ಯಾಕ್ ಮಾಡಿದ್ದ.

2018-19ರಲ್ಲಿ ವ್ಯವಸ್ಥಿತ ಸಂಚು ರೂಪಿಸಿ ಆನ್​ಲೈನ್ ಪೋಕರ್ ಆ್ಯಪ್ ಹಾಗೂ ರಾಜ್ಯ ಸರ್ಕಾರ ಇ-ಪ್ರೊಕ್ಯೂರ್​ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ 11.5 ಕೋಟಿ ಲಪಾಟಿಸಿದ್ದ. 2020ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಕೆಂಪೇಗೌಡ ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಬಿಟ್ ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು.

ಬಹುಕೋಟಿ ಹಗರಣ ಹಿನ್ನೆಲೆಯಲ್ಲಿ 2023ರಲ್ಲಿ ಕಾಂಗ್ರೆಸ್ ಸರ್ಕಾರ ಎಸ್ಐಟಿ ರಚಿಸಿತ್ತು. ಕಳೆದ ಏಪ್ರಿಲ್​ನಲ್ಲಿ ಇಡಿ ದಾಳಿ ನಡೆಸಿತ್ತು. ಮೇ ತಿಂಗಳಲ್ಲಿ ಶ್ರೀಕಿ, ಸುನೀಶ್ ಹೆಗ್ಡೆ ಹಾಗೂ ರಾಬಿನ್ ಖಂಡೆವಾಲಾ ಅವರನ್ನು ಬಂಧಿಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇಡಿ ತನಿಖೆ ನಡೆಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments