ಬೆಂಗಳೂರು: 7-7-2026- ಸಿಲಿಕಾನ್ ಸಿಟಿಯ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲೊಂದಾದ ಅಸೆಟ್ಸ್ ಸಂಸ್ಥೆಯು, ದೇಶದ ಖ್ಯಾತ ಟೆನ್ನಿಸ್ ಅಕಾಡೆಮಿಯಾದ ರೋಹನ್ ಬೋಪಣ್ಣ ಟೆನ್ನಿಸ್ ಅಕಾಡೆಮಿ (ಆರ್ ಬಿ ಟಿ ಎ) ಜೊತೆಗೆ ಐದು ವರ್ಷಗಳ ಅವಧಿಯ ಪಾಲುದಾರಿಕೆಯನ್ನು ಘೋಷಿಸಿದೆ.
ಭಾರತದಲ್ಲಿ ಟೆನ್ನಿಸ್ ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಅತ್ಯುನ್ನತ ಗುಣಮಟ್ಟದ ತರಬೇತಿ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಒಪ್ಪಂದದ ಅಡಿಯಲ್ಲಿ ಅಸೆಟ್ಸ್ ಸಂಸ್ಥೆಯು ಆರ್.ಬಿ.ಟಿ.ಎ.ನ ಸಹ-ಪಾಲುದಾರನಾಗಿ ಕಾರ್ಯ ನಿರ್ವಹಿಸಲಿದ್ದು, ಅಕಾಡೆಮಿಯ ಮೂಲಸೌಕರ್ಯ ವಿಸ್ತರಣೆ ಮತ್ತು ಉದಯೋನ್ಮುಖ ಕ್ರೀಡಾ ಪ್ರತಿಭೆಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡಲಿದೆ. ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ದೀರ್ಘಾವಧಿಯಲ್ಲಿ ಜಾಗತಿಕ ಮಟ್ಟದ ಚಾಂಪಿಯನ್ ಗಳನ್ನು ಸೃಷ್ಟಿಸುವ ಭದ್ರ ಬುನಾದಿ ಹಾಕುವುದು ಈ ಜಂಟಿ ಯೋಜನೆಯ ಮುಖ್ಯ ಆಶಯವಾಗಿದೆ.
ಭಾರತದ ಹೆಮ್ಮೆಯ ಟೆನ್ನಿಸ್ ಐಕಾನ್, ಎರಡು ಬಾರಿಯ ಗ್ರಾಂಡ್ ಸ್ಲಾಮ್ ಚಾಂಪಿಯನ್ ಮತ್ತು ಮಾಜಿ ವಿಶ್ವ ನಂ. 1 ಆಟಗಾರ ರೋಹನ್ ಬೋಪಣ್ಣ ಅವರು ಸ್ಥಾಪಿಸಿರುವ ಈ ಅಕಾಡೆಮಿಯು ಕ್ರೀಡಾ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ. ಕಳೆದ 10 ವರ್ಷಗಳಿಗೂ ಹೆಚ್ಚು ಕಾಲದಿಂದ ಟೆನ್ನಿಸ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯು, 10ಕ್ಕೂ ಹೆಚ್ಚು ವ್ಯವಸ್ಥಿತ ಕಾರ್ಯಕ್ರಮಗಳ ಮೂಲಕ ಈಗಾಗಲೇ 700ಕ್ಕೂ ಹೆಚ್ಚು ಆಟಗಾರರಿಗೆ ತರಬೇತಿ ನೀಡಿದೆ. ಇಲ್ಲಿ ತರಬೇತುದಾರರು, ಕ್ರೀಡಾ ವಿಜ್ಞಾನಿಗಳು, ಫಿಸಿಯೋಥೆರಪಿಸ್ಟ್‌ಗಳು, ಪೌಷ್ಟಿಕಾಂಶ ತಜ್ಞರು ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿ ತಜ್ಞರು ಒಂದೇ ಸೂರಿನಡಿ ಕಾರ್ಯನಿರ್ವಹಿಸುತ್ತಿದ್ದು, ಕ್ರೀಡಾಳುಗಳ ಸಮಗ್ರ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಅಸೆಟ್ಸ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸುನಿಲ್ ಪಾರಿಕ್ ಅವರು, “ಅರ್ಹ ಯುವ ಆಟಗಾರರನ್ನು ಗುರುತಿಸಿ ಅವರಿಗೆ ಉನ್ನತ ಮಟ್ಟದ ತರಬೇತಿ ಹಾಗೂ ಮಾರ್ಗದರ್ಶನ ನೀಡುವಲ್ಲಿ ಆರ್‌ಬಿಟಿಎ ಈಗಾಗಲೇ ಅದ್ಭುತ ಕೆಲಸ ಮಾಡುತ್ತಿದೆ. ನಮ್ಮ ಈ ಸಹಭಾಗಿತ್ವವು ಆ ದಾರಿಯನ್ನು ಮತ್ತಷ್ಟು ಸುಗಮಗೊಳಿಸಲಿದೆ. ಕ್ರೀಡೆಗೆ ಯುವ ಪೀಳಿಗೆಯಲ್ಲಿ ಶಿಸ್ತು, ಆತ್ಮವಿಶ್ವಾಸ ಮತ್ತು ದೃಢ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿಯಿದೆ ಎಂದು ಅಸೆಟ್ಸ್ ಸದಾ ನಂಬುತ್ತದೆ” ಎಂದು ಹೇಳಿದರು.
ಆರ್‌ಬಿಟಿಎ ಸಂಸ್ಥಾಪಕರಾದ ರೋಹನ್ ಬೋಪಣ್ಣ ಮಾತನಾಡಿ, “ವಿಶ್ವದರ್ಜೆಯ ಆಟಗಾರರನ್ನು ಸೃಷ್ಟಿಸಲು ಕೇವಲ ಪ್ರತಿಭೆಯಷ್ಟೇ ಸಾಕಾಗುವುದಿಲ್ಲ; ಕೋಚಿಂಗ್, ಕ್ರೀಡಾ ವಿಜ್ಞಾನ ಮತ್ತು ಬದ್ಧತೆಯುಳ್ಳ ಪಾಲುದಾರರ ದೀರ್ಘಾವಧಿಯ ಬೆಂಬಲ ಬೇಕಾಗುತ್ತದೆ. ಅಸೆಟ್ಸ್ ಜೊತೆ ಕೈಜೋಡಿಸಿರುವುದು ನಮಗೆ ಸಂತಸ ತಂದಿದೆ. ಇದು ಭಾರತೀಯ ಟೆನ್ನಿಸ್ ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ಸ್ಪರ್ಧಿಸಲು ಸುಸ್ಥಿರ ಮಾರ್ಗವನ್ನು ಸೃಷ್ಟಿಸಲಿದೆ” ಎಂದು ಹೇಳಿದರು.



