Saturday, July 11, 2026
Google search engine
Homeಬೆಂಗಳೂರುವಿಐಎಸ್ಎಲ್ ಪುನಶ್ಚೇತನಕ್ಕೆ 10,000 ಕೋಟಿ ರೂ. ಎಲ್ಲಿ? ಎಚ್‌ಡಿಕೆಗೆ ಸಚಿವ ಈಶ್ಖರ್‌ ಖಂಡ್ರೆ ಪ್ರಶ್ನೆ

ವಿಐಎಸ್ಎಲ್ ಪುನಶ್ಚೇತನಕ್ಕೆ 10,000 ಕೋಟಿ ರೂ. ಎಲ್ಲಿ? ಎಚ್‌ಡಿಕೆಗೆ ಸಚಿವ ಈಶ್ಖರ್‌ ಖಂಡ್ರೆ ಪ್ರಶ್ನೆ

ಬೆಂಗಳೂರು: ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗದ ಎಚ್ಎಂಟಿ ಭೂಮಿ ಅರಣ್ಯವಾಗಿದ್ದು, ಅರಣ್ಯವಾಗೇ ಉಳಿಯುತ್ತದೆ, ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಹಕ್ಕಿದೆಯೇ ಹೊರತು ಎಚ್ಎಂಟಿಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವವನೂ ಅಲ್ಲ, ಕುಮಾರಸ್ವಾಮಿ ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷವೂ ಇಲ್ಲ. ಆದರೆ ಎಚ್.ಎಂ.ಟಿ. ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಮರಳಿ ಪಡೆದು ಅಲ್ಲಿ ಲಾಲ್ ಬಾಗ್, ಕಬ್ಬನ್ ಪಾರ್ಕ್ ಗಿಂತ ದೊಡ್ಡ ಉದ್ಯಾನ ನಿರ್ಮಿಸಿ ಉತ್ತರ ಬೆಂಗಳೂರಿಗರಿಗೆ ಅತ್ಯಗತ್ಯವಾದ ಶ್ವಾಸತಾಣ ಉಳಿಸಲು ನಿರ್ಧರಿಸಿದ್ದ ನಾನು ಪರಿಸರ ಆಸಕ್ತನಾಗಿ ಕುಮಾರಸ್ವಾಮಿ ಅವರ ಆರೋಪಕ್ಕೆ ಉತ್ತರ ಕೊಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸುವಾಗ ಯಾವ ಖಂಡ್ರೆ, ಎಚ್.ಎಂ.ಟಿ. ಆದಾಗ ನಾನು ಹುಟ್ಟೇ ಇರಲಿಲ್ಲ, ಹುಟ್ಟಿದ್ದರೂ ಮಗು ಎಂದೆಲ್ಲಾ ಮಾತನಾಡಿದ್ದಾರೆ. ನಾನೂ ಕೂಡ ಯಾವ ಸ್ವಾಮಿ… ಕುಮಾರಸ್ವಾಮಿ ಎನ್ನಬಹುದು. ಅವರೂ ಕೂಡ ಎಚ್.ಎಂ.ಟಿ. ಹುಟ್ಟಿದಾಗ ಹಸುಗೂಸೇ ಎನ್ನಬಹುದು. ಆದರೆ ನಾನು ಆ ಮಟ್ಟಕ್ಕೆ ಇಳಿಯುವುದಿಲ್ಲ ಎಂದರು.

ಇನ್ನು ಎಚ್.ಎಂ.ಟಿ. ಜಮೀನಿನ ಪ್ರಕರಣ ನ್ಯಾಯಾಲಯದಲ್ಲಿದೆ ಎಂದೂ ಅವರೇ ಹೇಳಿದ್ದಾರೆ. ಜೊತೆಗೆ ಎಚ್.ಎಂ.ಟಿ. ಭೂಮಿ ಮೇಲೆ ಸರ್ಕಾರಕ್ಕಿಲ್ಲ ಹಕ್ಕು ಎಂದೂ ಘೋಷಿಸಿದ್ದಾರೆ. ಈ ತೀರ್ಪು ಕೊಡಬೇಕಾದ್ದು ನ್ಯಾಯಾಧೀಶರೇ ಹೊರತು ಕುಮಾರಸ್ವಾಮಿ ಅವರಲ್ಲ. ಸುಪ್ರೀಂಕೋರ್ಟ್ ಹಲವು ತೀರ್ಪುಗಳಲ್ಲಿ ಒಂದು ಬಾರಿ ಅರಣ್ಯ ಎಂದು ಘೋಷಣೆ ಆದ ಭೂಮಿ ಅನ್ಯ ಉದ್ದೇಶಕ್ಕೆ ಕಾನೂನುಬದ್ಧವಾಗಿ ಪರಿವರ್ತನೆ ಆಗದಿದ್ದರೆ ಅರಣ್ಯವಾಗೇ ಉಳಿಯುತ್ತದೆ ಎಂದು ಹೇಳಿದೆ. ಜೊತೆಗೆ ಪರಿಸರದ ಹಕ್ಕುಗಳು, ಭೂ ಒಡೆತನದ ಹಕ್ಕಿಗಿಂತ ಮಿಗಲಾದ್ದು ಎಂದು ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗದ ಎಚ್.ಎಂ.ಟಿ. ಅರಣ್ಯ ಭೂಮಿ, ಅರಣ್ಯವಾಗೇ ಉಳಿಯುತ್ತದೆ. ರಾಜ್ಯ ಸರ್ಕಾರದ ಆಸ್ತಿಯಾಗೇ ಇರುತ್ತದೆ ಎಂದರು.

ಈ ಮಧ್ಯೆ ಬೆಂಗಳೂರು ನಗರ ಡಿಸಿಎಫ್ ನೋಟಿಸ್ ನೀಡಿದ್ದಾರೆ ಎಂದು ಕುಮಾರಸ್ವಾಮಿ ಅವರು ತಮ್ಮ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ, ಅದು ನೋಟಿಸ್ ಅಲ್ಲ. ಅರೆ ನ್ಯಾಯಿಕ ಪ್ರಾಧಿಕಾರದ ಆದೇಶ. ಮಾಜಿ ಮುಖ್ಯಮಂತ್ರಿಯವರಿಗೆ ಇಷ್ಟೂ ಮಾಹಿತಿ ಇಲ್ಲವೇ ಎಂದು ನನಗೆ ವ್ಯಥೆಯಾಗುತ್ತಿದೆ ಎಂದು ಈಶ್ವರ ಖಂಡ್ರೆ ವ್ಯಂಗ್ಯವಾಡಿದರು.

ಎ.ಸಿ. ಕೋರ್ಟ್, ಡಿ.ಸಿ. ಕೋರ್ಟ್ ನಲ್ಲಿ ನಡೆಯುವಂತೆಯೇ ಡಿಸಿಎಫ್ ನ್ಯಾಯಾಲಯದಲ್ಲಿ ಕೂಡ ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 64 ಎ ಅಡಿ ಅಂದರೆ ಒತ್ತುವರಿ ತೆರವು ಪ್ರಕ್ರಿಯೆ ನಡೆದಿದೆ,  ಎಚ್.ಎಂ.ಟಿ. ಯವರಿಗೆ ದಾಖಲೆ ಸಲ್ಲಿಸಲು ಅವಕಾಶ ನೀಡಿದ ಬಳಿಕ, ಸೂಕ್ತ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಈ ಆದೇಶ ಮಾಡಿದ್ದಾರೆ. ಆದೇಶದ ಬಗ್ಗೆ ಇವರಿಗೆ ತಕರಾರಿದ್ದರೆ ಕಾನೂನು ರೀತ್ಯ ಸಿ.ಎಫ್. ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿ ನಂತರ ಹೈಕೋರ್ಟ್ ಗೆ ಹೋಗಲಿ ಎಂದರು.

01.01.1901ರಿಂದ 31.5.1969ರವರೆಗೆ ರಾಜ್ಯದ ಯಾವುದೇ ಮೀಸಲು ಅರಣ್ಯವನ್ನು ಡೀಫಾರೆಸ್ಟ್ ಮಾಡಲು ಅಧಿಸೂಚನೆ ಹೊರಡಿಸಬೇಕು ಎಂಬ ನಿಯಮ ಇದೆ. ಅಂತಹ ಅಧಿಸೂಚನೆ ಆಗಿದ್ದರೆ ದಾಖಲೆ ಕೊಡಲಿ ಅದು ಬಿಟ್ಟು ನಾನು ದಾಖಲೆ ನೋಡದೆ ಮಾತನಾಡುತ್ತದ್ದೇನೆ ಎಂದು ಆರೋಪಿಸುವುದು ಬೇಡ ಎಂದರು.

ಎಚ್.ಎಂ.ಟಿ.ಗೆ ಜಮೀನು ಕೊಟ್ಟ ಸಂದರ್ಭದಲ್ಲೇ ಬೆಂಗಳೂರು ವಿಶ್ವವಿದ್ಯಾಲಯಕ್ಕೂ ಅರಣ್ಯ ಭೂಮಿ ನೀಡಲಾಗಿದೆ. 24 ಫೆಬ್ರವರಿ 1969ರಲ್ಲಿ ಅಧಿಕೃತ ಅಧಿಸೂಚನೆ ಮಾಡಿದ್ದಾರೆ ಎಂದು ದಾಖಲೆ ಪ್ರದರ್ಶಿಸಿದರು.
ಇದೇ ರೀತಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಿದ ಜಮೀನಿನಲ್ಲೂ ಸಮಸ್ಯೆ ಆಗಿದೆ. ರಾಜ್ಯ ಸರ್ಕಾರ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರಸ್ತಾವನೆ ಮಂಡಿಸಿ ಡಿನೋಟಿಫೈ ಮಾಡಿದ ಬಳಿಕ, ಘನ ಹೈಕೋರ್ಟ್ 1980ರ ನಂತರ ಈ ರೀತಿ ಡಿನೋಟಿಫೈ ಮಾಡಲು ಅವಕಾಶ ಇಲ್ಲ ಎಂದು ರದ್ದು ಮಾಡಿದೆ. ಹೀಗಾಗಿ ರಾಜ್ಯಕ್ಕೆ ಬೆಳಕು ಕೊಡಲು ತಮ್ಮ ಭೂಮಿ ನೀಡಿದವರಿಗೇ, ಅರಣ್ಯ ಭೂಮಿಯನ್ನು ಅಧಿಕೃತವಾಗಿ ಪರಿಹಾರವಾಗಿ ನೀಡಿದ್ದರೂ, ಹಕ್ಕು ನೀಡಲು ಆಗಿಲ್ಲ ಎಂದು ಹೇಳಿದರು.

ಎಚ್ಎಂಟಿ ಭೂಮಿ ಅರಣ್ಯ ಎಂದು ಕೇಂದ್ರ ಸರ್ಕಾರವೇ ಅಧಿಕೃತವಾಗಿ ಒಪ್ಪಿಕೊಂಡಿದೆ. 2018ರಲ್ಲಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿದ್ದಾಗ, ಅಂದಿನ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಎಚ್.ಎಂ.ಟಿ. ಭೂಮಿ ಮಾರಾಟ ಮಾಡಲು ಎನ್.ಓ.ಸಿ. ನೀಡುವಂತೆ ಕೋರಿ ಕೇಂದ್ರ ಅರಣ್ಯ, ಪರಿಸರ, ಹವಾಮಾನ ಬದಲಾವಣೆ ಸಚಿವಾಲಯದ ಕಾರ್ಯದರ್ಶಿ ಸಿ.ಕೆ. ಮಿಶ್ರಾ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ 2018 ನವೆಂಬರ್ 1ರಂದು ಪ್ರತ್ಯುತ್ತರ ಬರೆದಿರುವ ಶ್ರೀ.ಸಿಕೆ. ಮಿಶ್ರಾ ಅವರು, 1980ರ ಅಕ್ಟೋಬರ್ 25ರಲ್ಲಿದ್ದಂತೆ ಎಚ್ಎಂಟಿ ಭೂಮಿ ಅರಣ್ಯ ಆಗಿದ್ದು, ಅರಣ್ಯ ಸಂರಕ್ಷಣಾ ಕಾಯಿದೆ 1980 ಅನ್ವಯಿಸುತ್ತದೆ. ಹೀಗಾಗಿ ನೀರಾಕ್ಷೇಪಣಾ ಪತ್ರ ಕೊಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಎಂಬ ದಾಖಲೆ ಪ್ರದರ್ಶಿಸಿದರು.

ಈ ಮಧ್ಯೆ ಎಚ್.ಎಂ.ಟಿ. ತನ್ನ ಕಾರ್ಯಾಚರಣೆ ನಿಲ್ಲಿಸಿದೆ. ಕಳೆದ ಜನವರಿಯಲ್ಲಿ ತನ್ನ ಹೆಸರನ್ನೇ ಅಳಿಸಿಹಾಕುವಂತೆ ಸಾಂಸ್ಥಿಕ ವ್ಯವಹಾರಗಳ ಇಲಾಖೆಗೆ ಕೋರಿದೆ ಎಂದು ಮಾಧ್ಯಮ ವರದಿ ಹೇಳುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಇವರು ಹೇಗೆ ಪುನಶ್ಚೇತನ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಇನ್ನು ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ನೀಡಿರುವ ತೀರ್ಪಿನಲ್ಲಿ. ಯಾವ ಉದ್ದೇಶಕ್ಕೆ ಭೂಮಿ ನೀಡಲಾಗಿದೆಯೋ ಆ ಉದ್ದೇಶದ ಹೊರತಾಗಿ ಅನ್ಯ ಉದ್ದೇಶಕ್ಕೆ ಭೂಮಿಯ ಬಳಕೆಗೆ ಅವಕಾಶವಿಲ್ಲ. ಸರ್ಕಾರಕ್ಕೆ ಮರಳಿಸಬೇಕು ಎಂದು ತೀರ್ಪು ನೀಡಿದೆ. ಇಲ್ಲಿ ಎಚ್.ಎಂ.ಟಿ. ಮುಚ್ಚಿಹೋಗಿದೆ. ಅಂದರೆ ಭೂಮಿಯನ್ನು ಹಿಂತಿರುಗಿಸಬೇಕಲ್ಲವೇ, ಅದು ಹೇಗೆ ಮಾರಾಟ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸವಾಲು ಸ್ವೀಕಾರ:

ಕುಮಾರಸ್ವಾಮಿ ಅವರು ಎಚ್.ಎಂ.ಟಿ. ಅರಣ್ಯ ಪ್ರದೇಶಕ್ಕೆ ಬರುವಂತೆ ಸವಾಲು ಹಾಕಿದ್ದಾರೆ. ನಾನು ಸವಾಲು ಸ್ವೀಕರಿಸಲು ಸಿದ್ಧ ಆದರೆ ಕುಮಾರಸ್ವಾಮಿ ಮತ್ತೊಮ್ಮೆ ನಾನು ಅತಿಕ್ರಮ ಪ್ರವೇಶ ಮಾಡಿದ್ದೇನೆ ಎಂದು ಸುಳ್ಳು ಆರೋಪ ಮಾಡಬಾರದು ಅಷ್ಟೇ ಎಂದು ಛೇಡಿಸಿದರು.

ಈ ಹಿಂದೆ ನಾನು ಎಚ್.ಎಂ.ಟಿ. ಪ್ರದೇಶಕ್ಕೆ ಹೋದಾಗ ಅಲ್ಲಿನ ಅಧಿಕಾರಿಗಳೇ ನನಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಫೋಟೋ ಪ್ರದರ್ಶಿಸಿದ ಈಶ್ವರ ಖಂಡ್ರೆ, ಪುಷ್ಪಗುಚ್ಛ ನೀಡಿ ಸ್ವಾಗತಿಸಿದ ಮೇಲೆ ಅದು ಅತಿಕ್ರಮ ಪ್ರವೇಶವೇ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಎಚ್.ಎಂ.ಟಿ. ಪ್ರದೇಶದಲ್ಲಿ ನೂರಾರು ಎಕರೆ ಹಸಿರು ಹೊದಿಕೆ ಇರುವ ಉಪಗ್ರಹ ಚಿತ್ರ ಮತ್ತು ವಿಡಿಯೋ ಬಿಡುಗಡೆ ಮಾಡಿದರು.

ಇನ್ನು ಕಳೆದ 3 ವರ್ಷದಲ್ಲಿ ಅರಣ್ಯ ಸಚಿವನಾಗಿ ನಾನು ಎಷ್ಟು ಎಕರೆ ಅರಣ್ಯ ಒತ್ತುವರಿ ತೆರವು ಮಾಡಿಸಿದ್ದೇನೆ. ಏನು ಕಡಿದು ಕಟ್ಟೆ ಹಾಕಿದ್ದೇನೆ ಎಂದು ಕುಮಾರಸ್ವಾಮಿ ಕೇಳಿದ್ದಾರೆ. ನಾನು ಅರಣ್ಯ ಸಚಿವನಾಗಿ ಹೇಗೆ ಕೆಲಸ ಮಾಡಿದ್ದೇನೆ. ಏನು ಕೆಲಸ ಮಾಡಿದ್ದೇನೆ ಎಂಬುದನ್ನು ನೀವೇ ಮಾಧ್ಯಮದವರು ಜನತೆಗೆ ತಿಳಿಸಿದ್ದೀರಿ. ಜನರಿಗೆ ಚೆನ್ನಾಗಿ ಗೊತ್ತಿದೆ. ಕುಮಾರಸ್ವಾಮಿ ಅವರು ನಿಯಮಿತವಾಗಿ ನ್ಯೂಸ್ ನೋಡುವ, ಓದುವ ಅಭ್ಯಾಸ ಇಟ್ಟುಕೊಂಡಿದ್ದರೆ ಬಹುಶಃ ಈ ಪ್ರಶ್ನೆ ಕೇಳುತ್ತಿರಲಿಲ್ಲ ಅನಿಸುತ್ತದೆ ಎಂದರು.

ಬೆಂಗಳೂರಿನಲ್ಲಿ 10 ಸಾವಿರ ಕೋಟಿ ರೂ. ಬೆಲೆಬಾಳುವ 252 ಎಕರೆ ಅರಣ್ಯ ಒತ್ತುವರಿ ತೆರವು ಮಾಡಿಸಲಾಗಿದ್ದು, ಇಲ್ಲಿ ಗಿಡ ನೆಡಲಾಗಿದೆ ಎಂದು ಚಿತ್ರ ಸಾಕ್ಷ್ಯ ನೀಡಿದ ಈಶ್ವರ ಖಂಡ್ರೆ, ಇದರಲ್ಲಿ ಒಂದೇ ಒಂದು ಇಂಚು ಮಾರಾಟ ಮಾಡಿಲ್ಲ. ಹಸಿರು ಹೊದಿಕೆ ಹೆಚ್ಚಿಸಲಾಗಿದೆ ಎಂದರು.

ಕುಮಾರಸ್ವಾಮಿ ಅವರು ಕಾಡುಗೋಡಿಯ ಬಗ್ಗೆ ಸಹ ಕೇಳಿದ್ದಾರೆ ಕಾಡುಗೋಡಿಯಲ್ಲಿ 120 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸಿದ್ದು, ಅಲ್ಲಿ ಗಿಡಗಳನ್ನು ನೆಡಲಾಗಿದೆ, ಬೇಕಾದರೆ ಕುಮಾರಸ್ವಾಮಿ ಸ್ಥಳ ಪರಿಶೀಲನೆ ಮಾಡಲಿ ಎಂದರು.

ಈಶ್ವರ ಖಂಡ್ರೆ 3 ವರ್ಷದಲ್ಲಿ ಎಷ್ಟು ಅರಣ್ಯ ಒತ್ತುವರಿ ತೆರವು ಮಾಡಿಸಿದ್ದಾರೆ ಎಂದು ಕೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅರಣ್ಯ ಸಚಿವನಾಗುವ ಮೊದಲು ರಾಜ್ಯದಲ್ಲಿ 2019-2020ರಲ್ಲಿ 400.76 ಎಕರೆ, 2020-21ರಲ್ಲಿ 762.74 ಎಕರೆ, 2021-22ರಲ್ಲಿ 246.23 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿತ್ತು. ಆದರೆ ನಾನು ಅರಣ್ಯ ಸಚಿವನಾದ ಬಳಿಕ 3 ವರ್ಷದಲ್ಲಿ 2023-24ರಲ್ಲಿ 3116.36 ಎಕರೆ, 2024-25ರಲ್ಲಿ 3108.35 ಎಕರೆ, 2025-26ರಲ್ಲಿ 5979.42 ಎಕರೆ ಒಟ್ಟು 12204 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿದೆ ಎಂದು ವಿವರ ನೀಡಿದರು.

ಇದರ ಜೊತೆಗೆ 15 ಸಾವಿರ ಎಕರೆ ಭೂಮಿಯನ್ನು ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 17 ಮತ್ತು ಸೆಕ್ಷನ್ 33ರಡಿ ಹೊಸದಾಗಿ ಅರಣ್ಯ ಎಂದು ಘೋಷಿಸಲಾಗಿದೆ. ಜೊತೆಗೆ ಬೆಂಗಳೂರು ನಗರದ ಹೆಸರುಘಟ್ಟ ಕೆರೆಯ ಸುತ್ತಲ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿ ರಕ್ಷಿಸಲಾಗಿದೆ. ಇದರ ಜೊತೆಗೆ ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನವನ ಅಭಿವೃದ್ದಿಪಡಿಸಲು ಸಚಿವ ಸಂಪುಟದ ಅನುಮೋದನೆ ಪಡೆದಿದ್ದು, 50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಇನ್ನು ಕಾರವಾರ ಬಳಿಯ ಅಪ್ಸರಕೊಂಡ ಮುಗಳಿಯನ್ನು ದೇಶದ ಪ್ರಥಮ ಕಡಲ ವನ್ಯಜೀವಿಧಾಮ ಎಂದು ಘೋಷಿಸಿದ್ದೇನೆ. ಇದರ ಜೊತೆಗೆ ಅರಣ್ಯ ಅಪರಾಧ ತಡೆಯಲು ಗರುಡಾಕ್ಷಿ ಎಂಬ ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆ ಜಾರಿ ಮಾಡಲಾಗಿದೆ. ವನ್ಯಜೀವಿ -ಮಾನವ ಸಂಘರ್ಷ ತಡೆಯಲು ಇ-ಗಸ್ತು, ಸಮಗ್ರ ಕಮಾಂಡ್ ಸೆಂಟರ್ ತೆರೆಯಲಾಗಿದೆ. ಆನೆಗಳಿಗೆ ದೇಶೀಯವಾಗಿ ಅಭಿವೃದ್ಧಿ ಪಡಿಸಿದ ರೇಡಿಯೋ ಕಾಲರ್ ಹಾಕಲಾಗುತ್ತಿದೆ. ಬಹುಶಃ ನಾನು ಕಡಿದು ಕಟ್ಟೆ ಹಾಕಿರುವ ಇಷ್ಟು ಮಾಹಿತಿ ಸಾಕು ಎನಿಸುತ್ತದೆ ಎಂದ ಈಶ್ವರ ಖಂಡ್ರೆ, ಕಳೆದ 2 ವರ್ಷದಲ್ಲಿ ಕೇಂದ್ರ ಉಕ್ಕು ಸಚಿವರಾಗಿ ನೀವು ಮಾಡಿರುವ ಸಾಧನೆ ಏನು ಎಂದು ಪ್ರಶ್ನಿಸಿದರು.

ವಿ.ಐ.ಎಸ್.ಎಲ್.ಗೆ 10ಸಾವಿರ ಕೋಟಿ ರೂ. ಅಲ್ಲ 10 ನಯಾ ಪೈಸೆ ಬಂದಿಲ್ಲ:

ಕುಮಾರಸ್ವಾಮಿ 23 ಮೇ 2025ರಂದು ಭದ್ರಾವತಿಯ ಸರ್.ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಪುನಶ್ಚೇತನಗೊಳಿಸಲು 8ರಿಂದ 10 ಸಾವಿರ ಕೋಟಿ ಹೂಡಿಕೆ ಚಿಂತನೆ ನಡೆದಿದೆ. 2 ತಿಂಗಳಲ್ಲಿ ಡಿಪಿಆರ್ ಸಿದ್ಧವಾಗಲಿದೆ. ವರ್ಷಾಂತ್ಯಕ್ಕೆ ಪ್ರಧಾನಿ ಮೋದಿಯವರೇ ಶಂಕುಸ್ಥಾಪನೆ ಮಾಡ್ತಾರೆ ಅಂತ ಹೇಳಿದ್ರು. 2025 ಮುಗಿದು, 2026ರಲ್ಲಿ 7 ತಿಂಗಳು ಕಳೆಯುತ್ತಾ ಬಂದಿದೆ. 10ಸಾವಿರ ಕೋಟಿ ರೂ. ಇರಲಿ, 10 ನಯಾ ಪೈಸೆ ಕೂಡ ಬಂದಿಲ್ಲ ಎಂದರು.

ಕೆ.ಐ.ಓ.ಸಿ.ಎಲ್. ಪರಿಸರಕ್ಕೆ ಮಾಡಿರುವ ಹಾನಿ ಅಪಾರ:

ಇನ್ನು ಕೆ.ಐ.ಓ.ಸಿ.ಎಲ್. ಬಗ್ಗೆ ಹೇಳಿದ್ದೀರಿ. ಸ್ಲರ್ರಿ ಸಾಗಿಸಲು ದೇಶದಲ್ಲೇ ಮೊದಲ ಬಾರಿಗೆ ಬಂದರಿಗೆ ಪೈಪ್ ಹಾಕಿರುವ ಬಗ್ಗೆ ಹೇಳುತ್ತೀರಿ. ಇದೇ ಕೆ.ಐ.ಓ.ಸಿ.ಎಲ್. ಗಣಿಗಾರಿಕೆ ಮಾಡುವಾಗ ಅನುಮತಿ ಲ್ಲದೆ ಲಕ್ಯಾ ಡ್ಯಾಂ ಎತ್ತರ ಹೆಚ್ಚಿಸಿ, ಅರಣ್ಯ, ಪರಿಸರಕ್ಕೆ ಹಾನಿ ಮಾಡಿಲ್ಲವೇ. ಅರಣ್ಯ ಇಲಾಖೆಗೆ ಕೆಐಓಸಿಎಲ್ ಭೂಮಿಯನ್ನು ಹಸ್ತಾಂತರ ಮಾಡಬೇಕು. ಆದರೆ ಈವರೆಗೆ ಮಾಡಿಲ್ಲ. ಇದೆಲ್ಲಾ ನಾನು ಹೇಳಿರುವುದಲ್ಲ. 2008-09ರಲ್ಲಿ 13ನೇ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ವರದಿ ಹೇಳಿದೆ ಎಂದು ದಾಖಲೆ ಪ್ರದರ್ಶಿಸಿದರು.
ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಪರವಾನಗಿಯಲ್ಲಿ ಸೂಚಿಸಿದ್ದಕ್ಕಿಂತ ಹೆಚ್ಚುವರಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದ್ದರಿಂದ ಅಣೆಕಟ್ಟೆ ಎತ್ತರವನ್ನು ಅನಧಿಕೃತವಾಗಿ ಹೆಚ್ಚಿಸಿದ್ದರಿಂದ 340 ಹೆಕ್ಟೇರ್ ಮೀಸಲು ಅರಣ್ಯ ಮುಳುಗಡೆಯಾಗಿದೆ ಎಂದರು.

ವೇಣಿವೀರಾಪುರದಲ್ಲಿ ಪಾಳುಬಿದ್ದ ಸಾವಿರಾರು ಎಕರೆ:

ಇನ್ನು ಎನ್.ಎಂ.ಡಿ.ಸಿ. 2014ರಲ್ಲಿಯೇ ಬಳ್ಳಾರಿ ಜಿಲ್ಲೆಯ ವೇಣಿವೀರಾಪುರದಲ್ಲಿ ಉಕ್ಕು ಕಾರ್ಖಾನೆ ಆರಂಭಿಸುವುದಾಗಿ ಹೇಳಿ 2857.54 ಎಕರೆ ಭೂಮಿ ಪಡೆದಿದೆ. ಕೆಐಎಡಿಬಿ 2017ರಲ್ಲಿ ಭೂಮಿಯನ್ನು ಎನ್.ಎಂ.ಡಿ.ಸಿ. ವಶಕ್ಕೆ ನೀಡಿದೆ. 10 ವರ್ಷ ಕಳೆದರೂ ಈ ಕಾರ್ಖಾನೆ ಆರಂಭವೇ ಆಗಿಲ್ಲ. ಇತ್ತ ರೈತರು ಇಲ್ಲಿ ಉಳಿಮೆ ಮಾಡುವಂತಿಲ್ಲ. ಕೈಗಾರಿಕೆಯೂ ಸ್ಥಾಪನೆ ಆಗಿಲ್ಲ. ಇದು ನ್ಯಾಷನಲ್ ವೇಸ್ಟ್ ಅಲ್ಲವೇ. ಇಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸಿದ್ದರೆ 50 ಸಾವಿರ ಜನರಿಗೆ ಉದ್ಯೋಗ ಲಭಿಸುತ್ತಿತ್ತು. ಇದಕ್ಕೆ ನಿಮಗೆ ಯಾರು ಅಡ್ಡಿ ಪಡಿಸಿದ್ದರು. ಏಕೆ ಅಭಿವೃದ್ಧಿ ಮಾಡಲಿಲ್ಲ ಕುಮಾರಸ್ವಾಮಿ ಅವರೇ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದರು.
ನೀವು ಕೇಂದ್ರ ಸಚಿವರಾಗಿದ್ದೀರಿ, ಆದರೂ ಕರ್ನಾಟಕದವರು ಎಂಬುದನ್ನು ಮರೆಯಬೇಡಿ. ಕರ್ನಾಟಕದ ಜಲ, ನೆಲ, ಅರಣ್ಯ ಕಾಪಾಡಿ. ಶ್ವಾಸತಾಣ ಉಳಿಸಿ. ಬಿಡದಿಯ ಪರಿಸರದ ಬಗ್ಗೆ ಇರುವ ಕಾಳಜಿಯನ್ನೇ ಎಚ್.ಎಂ.ಟಿ. ಭೂಮಿ ಮತ್ತು ದೇವದಾರಿ ಭೂಮಿಗೂ ತೋರಿಸಿ ಎಂದು ಈಶ್ವರ ಖಂಡ್ರೆ ಹೇಳಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments