ಬೆಂಗಳೂರು: ನಾನು ನಮ್ಮ ಪಕ್ಷದ ರಾಜ್ಯಾಧ್ಯಕ್ಷ. ಹೀಗಾಗಿ ಪಕ್ಷದ ಸಂಘಟನೆಯ ಜವಾಬ್ದಾರಿ ನನಗಿದೆ. ರಾಜ್ಯಕ್ಕೆ ವಾಪಸ್ ಬಂದೇ ಬರುತ್ತೇನೆ. ಆದರೆ ಈಗಲೇ ಅಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜ್ಯಕ್ಕೆ ವಾಪಸ್ ಬರುತ್ತೇನೆ ಎಂದರೆ ಅದು ಈಗಲೇ ಎಂದಲ್ಲ. ಸದ್ಯಕ್ಕೆ ನಾನು ಕೇಂದ್ರ ಸಚಿವನಾಗಿದ್ದೇನೆ, ಇನ್ನೂ ಮೂರು ವರ್ಷ ಸಂಸದನಾಗಿ ಅಧಿಕಾರಾವಧಿ ಇದೆ ಎಂದರು.
ಇವತ್ತೇ, ನಾಳೆ ದಿನವೇ ಬರುತ್ತೇನೆ ಎಂದಲ್ಲ. ಕೇಂದ್ರದಲ್ಲಿ ನನಗೆ ಜವಾಬ್ದಾರಿ ನೀಡಲಾಗಿದೆ, ಅದನ್ನು ನಿಭಾಯಿಸುತ್ತಲೇ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನೂ ಮಾಡುತ್ತೇನೆ. ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ನಾನು ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ಅವರು ನೀಡಿದರು.
ಪ್ರಸ್ತುತ ನನ್ನ ಮೊದಲ ಆದ್ಯತೆ ರಾಜ್ಯದಲ್ಲಿರುವ ಕೆಟ್ಟ ಸರ್ಕಾರವನ್ನು ಹೊಡೆದುರುಳಿಸುವುದು. ಈ ನಿಟ್ಟಿನಲ್ಲಿ ಬಿಜೆಪಿ ಜೊತೆಗೂಡಿ ಕೆಲಸ ಮಾಡುವುದು ಎಂದರು.
ಸಿದ್ದರಾಮಯ್ಯ ಕಾಲದ ಟೆಂಡರ್’ಗಳ ರದ್ದು
ಹಿಂದಿನ ಸಿಎಂ ಸಿದ್ದರಾಮಯ್ಯ ಅವರ ಕಾಲದ ವಿವಿಧ ಟೆಂಡರ್ ಗಳನ್ನು ರದ್ದು ಮಾಡಿರುವ ಸಿಎಂ ಡಿಕೆಶಿ ಅವರು ಮರು ಟೆಂಡರ್ ಮಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಸಚಿವ ಕುಮಾರಸ್ವಾಮಿ ಅವರು ನಿರಾಕರಿಸಿದರು. ಇವತ್ತು ನಾನು ಈ ಬಗ್ಗೆ ಏನನ್ನೂ ಮಾತನಾಡಲ್ಲ. ಅದಕ್ಕೆ ಸೂಕ್ತ ಸಮಯ ಬರಲಿ, ಆಗ ಎಲ್ಲವನ್ನೂ ಬಯಲಿಗೆ ತರುತ್ತೇನೆ ಎಂದು ಸಚಿವರು ಹೇಳಿದರು.
ಈ ಬಗ್ಗೆ ನನಗೆ ಮಾಹಿತಿ ಇದೆ. ಇದು ಸರಿಯಾದ ಕ್ರಮ ಅಲ್ಲ. ಯಾಕೆ ಟೆಂಡರ್ ಗಳನ್ನು ರದ್ದು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಶಿಗ್ರದಲ್ಲಿಯೇ ಆ ಬಗ್ಗೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಹಿರಿಯೂರು ಉಪ ಚುನಾವಣೆಗೆ ಜೆಡಿಎಸ್ ಸಿದ್ಧತೆ
ಹಿರಿಯೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ನಮ್ಮ ಪಕ್ಷದಲ್ಲಿ ಒತ್ತಡ ಇದೆ. ಈ ಬಗ್ಗೆ ಬಿಜೆಪಿ ಉನ್ನತ ನಾಯಕರ ಜತೆ ಚರ್ಚೆ ನಡೆಸಿದ್ದೇನೆ. ಹಿರಿಯೂರು ಕ್ಷೇತ್ರದ ಮುಖಂಡರ ಜತೆ ಎರಡು ಮೂರು ಸಭೆಗಳನ್ನು ನಡೆಸಿದ್ದೇನೆ. ಸಮಯ ಇದೆ, ನೋಡೋಣ ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಶಾಸಕ ಎಂ.ಟಿ. ಕೃಷ್ಣಪ್ಪ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ, ಮುಖಂಡ ಶಾಂತಕುಮಾರ್ ಮುಂತಾದವರು ಉಪಸ್ಥಿತರಿದ್ದರು.



