ನವದೆಹಲಿ: ಮುಂಗಾರು ಅಧಿವೇಶನಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಆಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪ ಪ್ರಧಾನಿ ಸ್ಥಾನಕ್ಕೇರುವ ಸಾಧ್ಯತೆ ದಟ್ಟವಾಗಿದೆ.
ಪಂಜಾಬ್ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಂಗಾರು ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ಪುನರ್ ರಚನೆ ಮಾಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ತೊರೆದ ಸಂಸದರು ಹಾಗೂ ಮಹಾರಾಷ್ಟ್ರದಲ್ಲಿ ‘ಆಪರೇಷನ್ ಟೈಗರ್’ ಮಾಡಿದ ಏಕನಾಥ್ ಶಿಂಧೆ ಬಣ ಅಲ್ಲದೇ ಆಮ್ ಆದ್ಮಿ ಪಕ್ಷದಿಂದ ವಲಸೆ ಬಂದ ರಾಘವ್ ಚಡ್ಡಾಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆ ಇದೆ.
ಎನ್ ಡಿಎ ಸರ್ಕಾರದಲ್ಲಿ ಶಿವಸೇನಾ ಶಿಂಧೆ ಬಣದ ಬಲವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಶ್ರೀಕಾಂತ್ ಶಿಂಧೆ, ಓಂರಾಜೆ ನಿಂಬಾಳ್ಕರ್ ಮತ್ತು ಸಂಜಯ್ ಬಂದು ಜಾಧವ್ ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎಂದು ಹೇಳಲಾಗಿದೆ.
ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ ಆಪರೇಷನ್ ಟೈಗರ್ ಹಿಂದಿನ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದೆ. ಈ ಕಾರ್ಯಾಚರಣೆಯಲ್ಲಿ 7 ಸಂಸದರು ಉದ್ಧವ್ ಠಾಕ್ರೆ ಬಣ ತೊರೆದು ಎನ್ ಡಿಎ ಮೈತ್ರಿ ಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾಗೆ ಇತ್ತೀಚಿಗೆ ಸೇರ್ಪಡೆಯಾದರು.
ಇದೇ ವೇಳೆ ಮೋದಿ ಅವರ ಆಪ್ತ ಅಮಿತ್ ಶಾ ಅವರಿಗೆ ಉಪ ಪ್ರಧಾನಿ ಆಗಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರಿಗೆ ಕೊಕ್ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಕಗಳು ತಿಳಿಸಿವೆ.
ಅಲ್ಲದೇ ಇತ್ತೀಚೆಗೆ ರಾಜ್ಯಸ್ಥಾನ ಸ್ಥಾನ ಅವಧಿ ಮುಗಿದು ಸಚಿವ ಸ್ಥಾನ ಕಳೆದುಕೊಂಡ ಇಬ್ಬರ ಸ್ಥಾನಕ್ಕೆ ಹಾಗೂ ಕಳಪೆ ನಿರ್ವಹಣೆ ತೋರುತ್ತಿರುವ ಕೆಲವು ಸಚಿವರಿಗೆ ಕೊಕ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.



