Friday, July 10, 2026
Google search engine
Homeರಾಜ್ಯಕುಡಿಯುವ ನೀರಿಗಾಗಿ ಪ್ರತೀ ವಿಧಾನಸಭೆಗೆ 1 ಕೋಟಿ ಬಿಡುಗಡೆಗೆ ರಾಜ್ಯ ಸರ್ಕಾರ ಆದೇಶ

ಕುಡಿಯುವ ನೀರಿಗಾಗಿ ಪ್ರತೀ ವಿಧಾನಸಭೆಗೆ 1 ಕೋಟಿ ಬಿಡುಗಡೆಗೆ ರಾಜ್ಯ ಸರ್ಕಾರ ಆದೇಶ

ಬೆಳಗಾವಿ, ಜುಲೈ 8: ಸುವರ್ಣಸೌಧದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬರ ನಿರ್ವಹಣೆ, ಕುಡಿಯುವ ನೀರು, ಕೃಷಿ, ಮೂಲಸೌಕರ್ಯ, ಅರಣ್ಯ ಅನುಮತಿಗಳು, ರಸ್ತೆ ಕಾಮಗಾರಿಗಳು, ಮುಜರಾಯಿ ದೇವಸ್ಥಾನಗಳ ಭದ್ರತೆ ಹಾಗೂ ಆಡಳಿತದ ಜವಾಬ್ದಾರಿಗಳ ಕುರಿತು ಮಹತ್ವದ ನಿರ್ದೇಶನಗಳನ್ನು ನೀಡಿದರು.

ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ತುರ್ತು ಸಮಸ್ಯೆ ಪರಿಹರಿಸಲು ತಲಾ ₹1 ಕೋಟಿ ಬಿಡುಗಡೆ ಮಾಡಲು ಸಭೆಯಲ್ಲೇ ಆದೇಶಿಸಿದರು. ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಯಾವುದೇ ಗ್ರಾಮ ನಿರ್ಲಕ್ಷ್ಯಕ್ಕೆ ಒಳಗಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

“ನೀರಿನ ಬಿಕ್ಕಟ್ಟನ್ನು ಎದುರಿಸಲು ಸರ್ಕಾರದ ಬಳಿ ಹಣದ ಕೊರತೆ ಇಲ್ಲ. ಅಗತ್ಯವಿದ್ದರೆ ಹೆಚ್ಚುವರಿ ಅನುದಾನವೂ ಬಿಡುಗಡೆ ಮಾಡಲಾಗುವುದು. ಜನರಿಗೆ ನೀರು ಒದಗಿಸುವುದು ಸರ್ಕಾರದ ಮೊದಲ ಆದ್ಯತೆ” ಎಂದು ಅವರು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿಗಳ ವಿಪತ್ತು ನಿರ್ವಹಣಾ ನಿಧಿಯಲ್ಲಿ ಈಗಾಗಲೇ ಲಭ್ಯವಿರುವ ಅನುದಾನವನ್ನು ತಕ್ಷಣ ಬಳಸುವಂತೆ ಸೂಚಿಸಿದ ಅವರು, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಲಭ್ಯವಿರುವ ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿ, ಅಗತ್ಯವಿದ್ದರೆ ಸರ್ಕಾರದಿಂದ ಹೆಚ್ಚುವರಿ ನೆರವು ಪಡೆಯುವಂತೆ ತಿಳಿಸಿದರು.

ನೀರಿನ ದೀರ್ಘಕಾಲೀನ ಭದ್ರತೆಗೆ ಹೂಳು ತೆಗೆಯುವುದು, ಮಳೆ ನೀರು ಸಂಗ್ರಹಣೆ, ಕೆರೆಗಳ ಪುನಶ್ಚೇತನ ಹಾಗೂ ಪೈಪ್‌ಲೈನ್ ವಿಸ್ತರಣೆ ಸೇರಿದಂತೆ ಸಮಗ್ರ ಜಲಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ ಮುಖ್ಯಮಂತ್ರಿ, ಕುಡಿಯುವ ನೀರಿನ ಯೋಜನೆಗಳಿಗೆ ಅರಣ್ಯ ಇಲಾಖೆಯ ಅನುಮತಿಗಳು ಅನಗತ್ಯವಾಗಿ ವಿಳಂಬವಾಗಬಾರದು ಎಂದು ನಿರ್ದೇಶನ ನೀಡಿದರು. ಶಾಲೆಗಳು ಹಾಗೂ ಕುಡಿಯುವ ನೀರಿನ ಸಂಪರ್ಕಗಳಿಗೆ ಸಂಬಂಧಿಸಿದ ಅರಣ್ಯ ಅನುಮೋದನೆಗಳನ್ನು ಆದ್ಯತೆಯ ಮೇಲೆ ಇತ್ಯರ್ಥಗೊಳಿಸಬೇಕು ಎಂದರು.

ಶಾಸಕರು ಪ್ರಸ್ತಾಪಿಸಿರುವ ಸ್ಥಗಿತಗೊಂಡ ಬೋರ್‌ವೆಲ್‌ಗಳು, ವಿದ್ಯುತ್ ಸಂಪರ್ಕ ಹಾಗೂ ಪೈಪ್‌ಲೈನ್ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವುದು ಜಿಲ್ಲಾಧಿಕಾರಿಗಳ ನೇರ ಜವಾಬ್ದಾರಿ ಎಂದು ತಿಳಿಸಿದ ಅವರು, “ಈ ವಿಷಯದಲ್ಲಿ ಮತ್ತೆ ಶಾಸಕರಿಂದ ದೂರುಗಳು ಬರಬಾರದು” ಎಂದು ಎಚ್ಚರಿಸಿದರು.

ಬೆಳೆವಿಮೆ ಯೋಜನೆಯಲ್ಲಿ ಅಕ್ರಮಗಳ ಕುರಿತು ವ್ಯಾಪಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಮಗ್ರ ವರದಿ ಪಡೆದು ಪ್ರತ್ಯೇಕ ಪರಿಶೀಲನಾ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ಬೆಳಗಾವಿ ವಿಭಾಗದ ಅಭಿವೃದ್ಧಿ ಕುರಿತು ಮಾತನಾಡಿದ ಅವರು, “ನಮ್ಮ ಗಮನ ಕೇವಲ ಬರ ನಿರ್ವಹಣೆ ಅಥವಾ ನೀರಾವರಿಯ ಮೇಲಷ್ಟೇ ಇಲ್ಲ. ಬೆಳಗಾವಿ ವಿಭಾಗದ ಸಮಗ್ರ, ಸಮತೋಲನ ಮತ್ತು ಸುಸ್ಥಿರ ಅಭಿವೃದ್ಧಿಯೇ ನಮ್ಮ ಗುರಿ. ಅಧಿಕಾರಿಗಳು ಸಮಸ್ಯೆಗಳ ಪಟ್ಟಿ ಮಾಡುವುದಕ್ಕಿಂತ ಪರಿಹಾರದ ಮಾರ್ಗಗಳನ್ನು ಸರ್ಕಾರಕ್ಕೆ ಸೂಚಿಸಬೇಕು” ಎಂದು ಹೇಳಿದರು.

ಸರ್ಕಾರಿ ಕಾಮಗಾರಿಗಳಲ್ಲಿ ಪಾರದರ್ಶಕತೆಗೆ ಒತ್ತು ನೀಡಿದ ಮುಖ್ಯಮಂತ್ರಿ, ಯಾವುದೇ ರಸ್ತೆ ಕಾಮಗಾರಿ ಆರಂಭಕ್ಕೂ ಮುನ್ನ, ಕಾಮಗಾರಿ ನಡೆಯುವ ವೇಳೆ ಹಾಗೂ ಪೂರ್ಣಗೊಂಡ ನಂತರದ ಛಾಯಾಚಿತ್ರ ಮತ್ತು ವಿಡಿಯೊ ದಾಖಲಾತಿ ಕಡ್ಡಾಯವಾಗಬೇಕು ಎಂದು ಸೂಚಿಸಿದರು. “ಒಂದೇ ರಸ್ತೆಗೆ ವಿವಿಧ ಇಲಾಖೆಗಳು ಅಥವಾ ವಿವಿಧ ಯೋಜನೆಗಳ ಹೆಸರಿನಲ್ಲಿ ಬಿಲ್ ಸಲ್ಲಿಸಿ ವಂಚನೆ ಮಾಡಿದರೆ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದರು.

ಕುಡಿಯುವ ನೀರಿನ ಯೋಜನೆಗಳ ಗುಣಮಟ್ಟ ಹಾಗೂ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ತಾಂತ್ರಿಕ ಆಡಿಟ್ ನಡೆಸಲಾಗುವುದು ಎಂದು ತಿಳಿಸಿದ ಅವರು, ಯೋಜನೆಗಳ ಅನುಷ್ಠಾನದಲ್ಲಿ ಗುಣಮಟ್ಟಕ್ಕೆ ಯಾವುದೇ ರಾಜಿ ಇರಬಾರದು ಎಂದರು.

ಮುಜರಾಯಿ ದೇವಸ್ಥಾನಗಳ ಭದ್ರತೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ದೇವಸ್ಥಾನಗಳ ನಿಧಿಯನ್ನು ಸುರಕ್ಷಿತವಾಗಿಡಲು ಹಾಗೂ ದುರುಪಯೋಗವನ್ನು ತಡೆಯಲು ಜಿಲ್ಲಾಧಿಕಾರಿಗಳು ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಎಲ್ಲಾ ಪ್ರಮುಖ ದೇವಸ್ಥಾನಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಸಮರ್ಪಕ ಭದ್ರತೆ ಒದಗಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧೀಕ್ಷಕರದ್ದಾಗಿದೆ ಎಂದು ಹೇಳಿದರು. ಧಾರ್ಮಿಕ ದೇಣಿಗೆಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕಾಪಾಡುವುದು ಸರ್ಕಾರದ ಹೊಣೆಗಾರಿಕೆಯಾಗಿದೆ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ ಅವರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ನಿಖರ ಮಾಹಿತಿ ಒದಗಿಸಬೇಕು ಹಾಗೂ ನಕಲಿ ದಾಖಲೆಗಳನ್ನು ತೆರವುಗೊಳಿಸಿ ಸರ್ಕಾರದ ಯೋಜನೆಗಳು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಗಡಿ ಜಿಲ್ಲೆಗಳಲ್ಲಿ ಮಾದಕ ವಸ್ತುಗಳು ಮತ್ತು ಅಕ್ರಮ ಮದ್ಯ ಸಾಗಾಣಿಕೆಯನ್ನು ಕಟ್ಟುನಿಟ್ಟಾಗಿ ತಡೆಯಲು ಪೊಲೀಸ್ ಮತ್ತು ಜಿಲ್ಲಾ ಆಡಳಿತ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.

ರೈತರಿಗೆ ಅಗತ್ಯ ಪ್ರಮಾಣದ ರಸಗೊಬ್ಬರ ಮತ್ತು ಬಿತ್ತನೆ ಬೀಜ ಲಭ್ಯವಾಗುವಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ವಹಿಸುವಂತೆ ಕೃಷಿ ಇಲಾಖೆಗೆ ಸೂಚಿಸಿದ ಅವರು, ಕಾಳಸಂತೆಯಲ್ಲಿ ಬೀಜ ಅಥವಾ ಗೊಬ್ಬರ ಮಾರಾಟವಾದರೆ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿದರು.

ಕೃಷಿ ಇಲಾಖೆಗೆ ವಿಶೇಷ ನಿರ್ದೇಶನ ನೀಡಿದ ಮುಖ್ಯಮಂತ್ರಿ, ಮಳೆ ವಿಳಂಬವಾಗಿರುವ ಪ್ರದೇಶಗಳಲ್ಲಿ ಕಡಿಮೆ ಅವಧಿಯಲ್ಲಿ ಬೆಳೆಯುವ ಹಾಗೂ ಕಡಿಮೆ ನೀರಿನ ಅವಶ್ಯಕತೆ ಇರುವ ಬೆಳೆಗಳನ್ನು ಬೆಳೆಯಲು ರೈತರಿಗೆ ತಕ್ಷಣ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು. ಮಳೆ ನೀರಿನ ಸಂಗ್ರಹಣೆಗೆ ಸೂಕ್ತ ಸ್ಥಳಗಳಲ್ಲಿ ಕ್ಯಾಚ್-ಪಿಟ್‌ಗಳನ್ನು ನಿರ್ಮಿಸಿ ನೀರಿನ ಸಂರಕ್ಷಣೆಯನ್ನು ಬಲಪಡಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments