ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಹಿರಿಯ ಪುತ್ರ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹಾಸನ ಹಿಮ್ಸ್ ನಲ್ಲಿ ವೈದ್ಯಕೀಯ ಪರೀಕ್ಷೆ ನಂತರ ಪೊಲೀಸರು ಸೂರಜ್ ರೇವಣ್ಣ ಅವರನ್ನು ಬೆಂಗಳೂರಿನ ಕೋರಮಂಗಲದಲ್ಲಿರುವ 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ನ್ಯಾಯಾಧೀಶರಾದ ಶಿವಕುಮಾರ್ ಪ್ರಕರಣ ಗಂಭೀರವಾಗಿರುವುದರಿಂದ ಸೂರಜ್ ರೇವಣ್ಣಗೆ 14 ನ್ಯಾಯಾಂಗ ಬಂಧನಕ್ಕೆ ವಿಧಿಸಿ ಆದೇಶ ನೀಡಿದರು.
ಪ್ರಕರಣ ಇನ್ನೂ ಅಧಿಕೃತವಾಗಿ ಸಿಐಡಿಗೆ ವರ್ಗಾವಣೆ ಆಗಿಲ್ಲ. ಹೀಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸೋಮವಾರ ಬಾಡಿ ವಾರೆಂಟ್ ಮೇಲೆ ಸಿಐಡಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಸಂತ್ರಸ್ತನ ವಿರುದ್ದ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಸೂರಜ್ ರೇವಣ್ಣ ಶನಿವಾರ ಸಂಜೆ ಹಾಸನದ ಸೆನ್ ಠಾಣೆಗೆ ತೆರಳಿದ್ದರು. ಈ ವೇಳೆ ಸೂರಜ್ ರೇವಣ್ಣರನ್ನು ವಶಕ್ಕೆ ಪಡೆದ ಹಾಸನ ಪೊಲೀಸರು ಮುಂಜಾನೆಯವರೆಗೂ ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ಬೆಳಗ್ಗೆ ಸೂರಜ್‌ರನ್ನು ಅಧಿಕೃತವಾಗಿ ಬಂಧಿಸಿದರು.