Wednesday, August 26, 2026
Google search engine
Homeಜಿಲ್ಲಾ ಸುದ್ದಿಅಡುಗೆ ವಿಷಯಕ್ಕೆ ಜಗಳ: 5 ಮಕ್ಕಳ ಜೊತೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ

ಅಡುಗೆ ವಿಷಯಕ್ಕೆ ಜಗಳ: 5 ಮಕ್ಕಳ ಜೊತೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ

ವಿಜಯಪುರ: ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿ ಐವರು ಮಕ್ಕಳು ಸೇರಿ ಇಡೀ ಕುಟುಂಬವೇ ನಗರದ ಹೊರವಲಯದಲ್ಲಿನ ಭೂತನಾಳ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಭೂತನಾಳ ತಾಯಿ ಶೋಭಾ ಜಾಲಗೇರಿ ಮಕ್ಕಳಾದ (45), ವಿದ್ಯಾ (16), ಸುವರ್ಣ (14), ಗೌಡೇಶ್ (ಮೂಗ) (10), ವಿಕಾಸ (5) ಸಾನಿಕಾ (7) ಮೃತ ದುರ್ದೈವಿಗಳು.

ಕೆರೆಯಲ್ಲಿ ಮೃತದೇಹಗಳು ಬುಧವಾರ ಬೆಳಿಗ್ಗೆ ತೇಲುತ್ತಿರುವುದನ್ನು ವಾಯುವಿಹಾರಕ್ಕೆ ತೆರಳಿದ್ದವರು ಗಮನಿಸಿ ‌ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶೋಭಾ ಹಾಗೂ ಅವರ ಪತಿ ಭೀಮರಾಯ ಜಾಲಗೇರಿ ನಡುವೆ ಕೌಟುಂಬಿಕ ವಿಚಾರವಾಗಿ ಆ.23 ರಂದು ಜಗಳ ನಡೆದಿತ್ತು, ಇದರಿಂದ ಮನನೊಂದಿದ್ದ ಶೋಭಾ ಮರುದಿನ ಆ.24ರಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಐವರು ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರಗೆ ಹೋಗಿದ್ದರು. ಬಳಿಕ ಅವರು ಎಲ್ಲಿಗೆ ತೆರಳಿದ್ದಾರೆ ಎಂಬುದು ತಿಳಿದುಬಂದಿರಲಿಲ್ಲ.

ಪತ್ನಿ ಹಾಗೂ ಮಕ್ಕಳಿಗಾಗಿ ಭೀಮರಾಯ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ವಿಜಯಪುರ ಠಾಣೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.

ಭೂತನಾಳ ಕೆರೆಯಲ್ಲಿ ಆರು ಮಂದಿಯ ಮೃತದೇಹಗಳು ತೇಲುತ್ತಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಡಿವೈಎಸ್‌ಪಿ ನಾಗರಾಜ್, ಆದರ್ಶ ನಗರ ಠಾಣೆಯ ಪಿಎಸ್‌ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ತಾಯಿ ಹಾಗೂ ಐವರು ಮಕ್ಕಳ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಹಾಗೂ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಯಿ ಮಕ್ಕಳನ್ನು ಕೆರೆಗೆ ತಳ್ಳಿರಬಹುದೇ ಅಥವಾ ಕೆರೆ ಬಳಿ ತೆರಳಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದೇ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿ ”ಭೂತನಾಳ ಕೆರೆಯಲ್ಲಿ 6 ಜನರ ಮೃತದೇಹಗಳು ಪತ್ತೆಯಾಗಿರುವ ಬಗ್ಗೆ ಬೆಳಗ್ಗೆ ಸುಮಾರು 8.45ರ ವೇಳೆಗೆ ನಮಗೆ ಮಾಹಿತಿ ಬಂತು. ನಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಗುರುತು ಪತ್ತೆಗೆ ಮುಂದಾದಾಗ, ಸೋಮವಾರ ವಿಜಯಪುರ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ 6 ಜನ ನಾಪತ್ತೆಯಾಗಿರುವ ಬಗ್ಗೆ ಮೃತ ಮಹಿಳೆಯ ಪತಿ ದೂರು ದಾಖಲಿಸಿದ್ದಾರೆ ಎಂದು ಗೊತ್ತಾಗಿದೆ.

ಮಹಿಳೆಯು ಐವರು ಮಕ್ಕಳನ್ನು ಕರೆದುಕೊಂಡು ಹೋಗಿರುವುದಾಗಿ ಪತಿ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆ ಮೊಬೈಲ್​ ಮನೆಯಲ್ಲೇ ಬಿಟ್ಟು ಬಂದಿದ್ದರು. ವಿಧಿ-ವಿಜ್ಞಾನ ಹಾಗೂ ಮರಣೋತ್ತರ ಪರೀಕ್ಷೆ ವರದಿ ಬಂದ ಮೇಲೆ ಸಾವಿಗೆ ಕಾರಣ ಏನೆಂಬುದು ತಿಳಿದುಬರಲಿದೆ. ಮೇಲ್ನೋಟಕ್ಕೆ ಮನೆಯಿಂದ ಹೊರಬಂದ ದಿನವೇ ಕೆರೆಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆಯಿದೆ. ಗಾಳಿಯಿಂದಾಗಿ ಕೆರೆಯ ಒಂದು ಭಾಗದಿಂದ ಮತ್ತೊಂದು ಕಡೆಗೆ ಶವಗಳು ತೇಲಿ ಬಂದಿರುವ ಸಾಧ್ಯತೆಯಿದೆ.

ದೂರಿನಲ್ಲಿ, ಶ್ರಾವಣ ಸೋಮವಾರದ ಪೂಜೆ ಹಾಗೂ ಅಡುಗೆ ವಿಚಾರವಾಗಿ ಆ.23 ರಂದು ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಮನೆ ಬಿಟ್ಟು ಬಂದಿರುವುದಾಗಿ ಪತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುವುದು. ಪತಿ ಕೃಷಿ ಕೆಲಸ ಮಾಡುತ್ತಿದ್ದು, ಆತನ ವಿಚಾರಣೆ ನಡೆಸಲಾಗುವುದು” ಎಂದು ಲಕ್ಷ್ಮಣ ನಿಂಬರಗಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments