ಬೆಳಗಾವಿ: ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಳ ಹಾಗೂ ರಾಜ್ಯದ ಇಥನಾಲ್ ಅನ್ನು ಕೇಂದ್ರವೇ ಖರೀದಿಸಬೇಕು ಎಂಬ ಪ್ರಮುಖ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ನವದೆಹಲಿಯಲ್ಲಿ ನಡೆದ ಮಾತುಕತೆ ವಿಫಲವಾಗಿದೆ. ಇದರ ಬೆನ್ನಲ್ಲೇ ಆಕ್ರೋಶಗೊಂಡ ರೈತರು ಮಂಗಳವಾರ ಕರ್ನಾಟಕ-ಮಹಾರಾಷ್ಟ್ರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
ಕಬ್ಬಿಗೆ ಪ್ರತಿ ಟನ್ಗೆ 5,5೦೦ ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ರಾಜ್ಯದಲ್ಲಿ ಉತ್ಪಾದನೆಯಾಗುವ ಸಂಪೂರ್ಣ ಇಥನಾಲ್ ಅನ್ನು ಕೇಂದ್ರ ಸರ್ಕಾರವೇ ಖರೀದಿಸಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ 29ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆ ಎದುರು ಧರಣಿ ನಡೆಸಲು ಮುಂದಾದಾಗ, ಸ್ಥಳೀಯ ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಎಂ.ಆರ್. ಪಾಟೀಲ ಅವರು ಮಧ್ಯಸ್ಥಿಕೆ ವಹಿಸಿ ಅಕ್ಟೋಬರ್ 12ರಂದು ದೆಹಲಿಯಲ್ಲಿ ಸಭೆ ಕರೆಯಿಸುವ ಭರವಸೆ ನೀಡಿದ್ದರು.
ಆ ಭರವಸೆಯಂತೆ ಸೋಮವಾರ ಬೆಳಗಾವಿಯಿಂದ ರೈತ ಮುಖಂಡರ ನಿಯೋಗ ದೆಹಲಿಗೆ ತೆರಳಿ ಮಾತುಕತೆ ನಡೆಸಿತಾದರೂ, ಕೇಂದ್ರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಇದರಿಂದ ಅಸಮಾಧಾನಗೊಂಡ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತರು ಮಂಗಳವಾರ ಬೆಳಗಿನಿಂದಲೇ ಜಿಲ್ಲೆಯ ಕೊಗನೋಳಿ, ಹತ್ತರಗಿ, ಮತ್ತು ಹಿರೇಬಾಗೇವಾಡಿ ಟೋಲ್ ಪ್ಲಾಜಾಗಳ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣವಾಗಿ ತಡೆದರು.
ಪ್ರತಿಭಟನಾ ನಿರತ ರೈತರು ಹೆದ್ದಾರಿಯಲ್ಲೇ ಉರುಳುಸೇವೆ ನಡೆಸಿ, ಪೊರಕೆಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ-ಧಾರವಾಡ ಹೆದ್ದಾರಿ ಸೇರಿದಂತೆ ಮಹಾರಾಷ್ಟ್ರ ಗಡಿ ಭಾಗದ ಸಂಪರ್ಕ ರಸ್ತೆಗಳು ಬಂದ್ ಆಗಿದ್ದರಿಂದ ಕಿಲೋಮೀಟರ್ಗಟ್ಟಲೆ ಸಾಲಿನಲ್ಲಿ ವಾಹನಗಳು ನಿಂತು ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿತು.
ಬರಗಾಲದ ಹಿನ್ನೆಲೆಯಲ್ಲಿ ಕಬ್ಬಿನ ಬೆಳೆ ಒಣಗುತ್ತಿದ್ದು, ಸೂಕ್ತ ಬೆಲೆ ಸಿಗದೆ ಬೆಳೆಗಾರರು ಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ಬೇಡಿಕೆಗಳನ್ನು ತಕ್ಷಣವೇ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಚುನ್ನಪ್ಪ ಪೂಜೇರಿ, ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ಪ್ರಮುಖರಾದ ನಿಂಗಪ್ಪ ಪಕಾಂಡಿ, ಅಶೋಕ ಅಂಗಡಿ, ವಿಜಯ ನಾಯಿಕ, ಪ್ರೇಮ ಚೌಗಲಾ ಹಾಗೂ ರವೀಂದ್ರ ಕುಂಬೋಜೆ ಸೇರಿದಂತೆ ಸಾವಿರಾರು ರೈತರು ಉಪಸ್ಥಿತರಿದ್ದರು.



