ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ವಿವಿಧ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಆಧಾರರಹಿತ ಹಾಗೂ ಆಕ್ಷೇಪಾರ್ಹ ವಿಡಿಯೋಗಳು ಮತ್ತು ವರದಿಗಳಿಗೆ ತಡೆ ನೀಡಿ ಸಿಟಿ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಮಾನಹಾನಿ ವರದಿ ಪ್ರಕಟಿಸದಂತೆ ಕೋರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಸಿದ್ದರಾಮಯ್ಯ ಮಂಗಳವಾರ ಈ ಆದೇಶ ಹೊರಡಿಸಿದ್ದು, 42 ಮಾಧ್ಯಮಗಳಿಗೆ ವರದಿ ಪ್ರಸಾರಕ್ಕೆ ತಡೆ ನೀಡಿದೆ.
ತಮ್ಮ ಐದು ದಶಕಗಳ ಸಾರ್ವಜನಿಕ ಜೀವನದ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಕರ್ನಾಟಕದ ಕೆಲವು ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ಒಟ್ಟು 42 ಮಾಧ್ಯಮ ಸಂಸ್ಥೆಗಳು, ಮುದ್ರಣ ಮಾಧ್ಯಮಗಳು, ಸುದ್ದಿ ವಾಹಿನಿಗಳು ಹಾಗೂ ಗೂಗಲ್, ಫೇಸ್‌ಬುಕ್, ವಾಟ್ಸ್‌ಆ್ಯಪ್ ಮತ್ತು ಯೂಟ್ಯೂಬ್‌ನಂತಹ ಡಿಜಿಟಲ್ ವೇದಿಕೆಗಳ ವಿರುದ್ಧ ಶಾಶ್ವತ ತಡೆಯಾಜ್ಞೆ ನೀಡುವಂತೆ ಅವರು ಕೋರಿದ್ದಾರೆ.
15 ವರ್ಷಗಳ ಹಿಂದಿನ ಘಟನೆ:
2011ರಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದನ್ನು ರಾಜಕೀಯ ದುರುದ್ದೇಶದಿಂದ 15 ವರ್ಷಗಳ ಬಳಿಕ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಡಿಯೋಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದೂರು, ವೈದ್ಯಕೀಯ ದಾಖಲೆ ಅಥವಾ ಸ್ವತಂತ್ರ ಸಾಕ್ಷ್ಯಗಳನ್ನು ಮುಂದಿಡದೆ, ತಮ್ಮ ತೇಜೋವಧೆ ಮಾಡುವ ಉದ್ದೇಶದಿಂದ ವಿಷಯವನ್ನು ಪ್ರಸಾರ ಮಾಡಲಾಗಿದೆ ಎಂಬುದು ಸಿದ್ದರಾಮಯ್ಯ ಅವರ ಆರೋಪವಾಗಿದೆ.
ತಮ್ಮ ವಿರುದ್ಧದ ವಿಡಿಯೋಗಳು, ಅವುಗಳ ಶೀರ್ಷಿಕೆಗಳು ಹಾಗೂ ತುಣುಕುಗಳನ್ನು ಪತ್ರಿಕೆಗಳು, ಟಿವಿ ವಾಹಿನಿಗಳು ಮತ್ತು ಇತರ ಇಂಟರ್ನೆಟ್ ಮಾಧ್ಯಮಗಳಲ್ಲಿ ಮರುಪ್ರಸಾರ ಅಥವಾ ಮರುಪ್ರಕಟಿಸದಂತೆ ನಿರ್ಬಂಧ ವಿಧಿಸಬೇಕು. ಅಲ್ಲದೆ, ಈಗಾಗಲೇ ಅಂತರ್ಜಾಲದಲ್ಲಿ ಪ್ರಕಟವಾಗಿರುವ ಸಂಬಂಧಿತ ಲಿಂಕ್‌ಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ವಿಡಿಯೋ ಪ್ರಸಾರ ಆರೋಪ:
2026ರ ಸೆಪ್ಟೆಂಬರ್ 27ರಂದು ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ತಮ್ಮ ವಿರುದ್ಧ ರಾಜಕೀಯ ಪ್ರೇರಿತ ಹಾಗೂ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪಗಳನ್ನು ಒಳಗೊಂಡ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಲಾಗಿತ್ತು ಎಂದು ಸಿದ್ದರಾಮಯ್ಯ ಅರ್ಜಿಯಲ್ಲಿ ತಿಳಿಸಿದ್ದಾರೆ.
ಬಳಿಕ ಮತ್ತೊಂದು ವಾಹಿನಿಯು ‘ರಾಜ್ಯ ರಾಜಕಾರಣದ ಬಿಗ್ಗೆಸ್ಟ್ ಸಿಡಿ ಸ್ಫೋಟ’ ಎಂಬ ಶೀರ್ಷಿಕೆಯಡಿ ಯಾವುದೇ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಕಾರ್ಯಕ್ರಮ ಪ್ರಸಾರ ಮಾಡಿದೆ. ಇದರಿಂದ ತಮಗೆ ತೀವ್ರ ಮಾನಹಾನಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಿತ ವಿಡಿಯೋಗಳು ಮತ್ತು ವರದಿಗಳ ಪ್ರಸಾರಕ್ಕೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದೆ.



