ಬೆಂಗಳೂರು: ಮಕ್ಕಳ ಮೇಲಿನ ಅತಿಯಾದ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. 1ರಿಂದ 9ನೇ ತರಗತಿಯ ಮಕ್ಕಳಿಗೆ ಕೋಚಿಂಗ್ ನೀಡುವುದನ್ನು ನಿರ್ಬಂಧಿಸುವ ಹಾಗೂ 10ನೇ ತರಗತಿಯಿಂದ ಮಾತ್ರ ಕೋಚಿಂಗ್ ಪಡೆಯಲು ಅವಕಾಶ ಕಲ್ಪಿಸುವ ಉದ್ದೇಶದ ಕರಡು ಮಾರ್ಗಸೂಚಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.
15 ವರ್ಷ ಪೂರ್ಣಗೊಳಿಸಿದ ಮಕ್ಕಳಿಗೆ ಮಾತ್ರ ಕೋಚಿಂಗ್ ಸೆಂಟರ್‌ಗಳಿಗೆ ಪ್ರವೇಶ ನೀಡುವ ಪ್ರಸ್ತಾವನೆಯನ್ನು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ಮಕ್ಕಳು ಬೆಳಗ್ಗೆಯಿಂದ ಸಂಜೆವರೆಗೆ ಶಾಲೆಯಲ್ಲಿ ಪಾಠ ಕಲಿತ ಬಳಿಕ ಕೋಚಿಂಗ್ ಸೆಂಟರ್‌ಗಳಿಗೆ ತೆರಳುತ್ತಿದ್ದಾರೆ. ಮನೆಗೆ ಬಂದ ನಂತರವೂ ಹೋಂವರ್ಕ್ ಮತ್ತು ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇದರಿಂದ ಮಕ್ಕಳಿಗೆ ಆಟ, ವಿಶ್ರಾಂತಿ ಹಾಗೂ ಮನರಂಜನೆಗೆ ಸಮಯವೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಮೇಲಿನ ಶೈಕ್ಷಣಿಕ ಒತ್ತಡ ಕಡಿಮೆ ಮಾಡಲು ಸರ್ಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ.
ಪೋಷಕರಿಂದ ಸ್ವಾಗತ:
ಟ್ಯೂಷನ್ ಹೆಸರಿನಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಓದಿನ ಒತ್ತಡ ಕಡಿಮೆಯಾಗುವುದರ ಜತೆಗೆ, ಉತ್ತಮ ರ್ಯಾಂಕ್ ಹಾಗೂ ಫಲಿತಾಂಶ ಕೊಡಿಸುವುದಾಗಿ ಆಮಿಷವೊಡ್ಡಿ ಪೋಷಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುವ ಕೋಚಿಂಗ್ ಸೆಂಟರ್‌ಗಳ ಪ್ರವೃತ್ತಿಗೂ ಕಡಿವಾಣ ಬೀಳಲಿದೆ ಎಂಬ ಅಭಿಪ್ರಾಯ ಪೋಷಕರಿಂದ ವ್ಯಕ್ತವಾಗಿದೆ.
ಕೋಚಿಂಗ್ ಸೆಂಟರ್‌ಗಳ ನೋಂದಣಿ, ಶುಲ್ಕ ವಸೂಲಿ ಹಾಗೂ ಮೂಲಸೌಕರ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ಉದ್ದೇಶಿಸಿದೆ. ಪ್ರತಿಯೊಂದು ಕೋಚಿಂಗ್ ಸೆಂಟರ್ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಅಗ್ನಿ ಸುರಕ್ಷತಾ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರಬೇಕು ಎಂಬ ಪ್ರಸ್ತಾವನೆಯೂ ಇದೆ. ನಿಯಮ ಉಲ್ಲಂಘಿಸುವ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ವಿನಾಯಿತಿಗೆ ಆಗ್ರಹ:
ಇನ್ನು ಕೋಚಿಂಗ್ ನಿರ್ಬಂಧವನ್ನು 9ನೇ ತರಗತಿಯವರೆಗೆ ಮಾತ್ರ ಸೀಮಿತಗೊಳಿಸಿರುವುದಕ್ಕೆ ಪ್ರಶ್ನೆಗಳು ಎದುರಾಗಿವೆ. 10, 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಮೇಲೂ ಪರೀಕ್ಷಾ ಅಂಕಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡ ಹೆಚ್ಚಾಗಿದೆ. ಹೀಗಾಗಿ ಈ ತರಗತಿಗಳ ವಿದ್ಯಾರ್ಥಿಗಳಿಗೂ ಕೋಚಿಂಗ್ ವ್ಯವಸ್ಥೆಯಿಂದ ವಿನಾಯಿತಿ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ಒಟ್ಟಿನಲ್ಲಿ, ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಬಾಲ್ಯ ಹಾಗೂ ವಿಶ್ರಾಂತಿಯ ಸಮಯವನ್ನು ಕಸಿದುಕೊಳ್ಳುತ್ತಿರುವ ಕೋಚಿಂಗ್ ಸಂಸ್ಕೃತಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಆದರೆ, ಕರಡು ಮಾರ್ಗಸೂಚಿಯ ಅಂತಿಮ ಸ್ವರೂಪ ಹೇಗಿರಲಿದೆ, ನಿಯಮಗಳು ಯಾವಾಗಿನಿಂದ ಜಾರಿಗೆ ಬರಲಿವೆ ಹಾಗೂ ಅವು ಮಕ್ಕಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಎಷ್ಟರಮಟ್ಟಿಗೆ ಕಡಿಮೆ ಮಾಡಲಿವೆ ಎಂಬುದನ್ನು ಕಾದುನೋಡಬೇಕಿದೆ.
