ಆಫ್ಘಾನಿಸ್ತಾನ ತಂಡ ಮಳೆಯಿಂದ ಅಡ್ಡಿಯಾದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 8 ರನ್ ಗಳಿಂದ ಸೋಲಿಸಿ ಟಿ-20 ವಿಶ್ವಕಪ್ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದೆ. ಈ ಮೂಲಕ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಸೆಮಿಫೈನಲ್ ರೇಸ್ ನಿಂದ ಹೊರಬಿದ್ದಿದೆ.
ಕಿಂಗ್ಸ್ ಟೌನ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್ ಕಲೆ ಹಾಕಿತು. ಮಳೆಯಿಂದ ಅಡ್ಡಿಯಾದ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 19 ಓವರ್ ಗಳಲ್ಲಿ 114 ರನ್ ಗುರಿ ನೀಡಲಾಗಿತ್ತು. ಸಾಧಾರಣ ಗುರಿ ಬೆಂಬತ್ತಿದ ಬಾಂಗ್ಲಾದೇಶ 17.5 ಓವರ್ ಗಳಲ್ಲಿ 105 ರನ್ ಗೆ ಆಲೌಟಾಯಿತು.
ಈ ಗೆಲುವಿನೊಂದಿಗೆ ಆಫ್ಘಾನಿಸ್ತಾನ ಗುಂಪು-1ರಲ್ಲಿ ಎರಡನೇ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿದರೆ, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ಕ್ರಮವಾಗಿ 3 ಮತ್ತು 4ನೇ ಸ್ಥಾನದೊಂದಿಗೆ ಸೆಮಿಫೈನಲ್ ರೇಸ್ ನಿಂದ ಹೊರಬದ್ದಿತು. ಆಸ್ಟ್ರೇಲಿಯಾ 24 ರನ್ ಗಳಿಂದ ಭಾರತ ವಿರುದ್ಧ ಸೋಲುಂಡಿತ್ತು. ಇದರಿಂದ ಬಾಂಗ್ಲಾ-ಆಫ್ಘಾನ್ ಪಂದ್ಯದ ಫಲಿತಾಂಶದ ಮೇಲೆ ನಿರೀಕ್ಷೆ ಇಡಲಾಗಿತ್ತು.
ಆಫ್ಘಾನಿಸ್ತಾನ ಪರ ಮಾರಕ ದಾಳಿ ಸಂಘಟಿಸಿದ ನವೀದ್ ಉಲ್ ಹಕ್ ಮತ್ತು ರಶೀದ್ ಖಾನ್ ತಲಾ 4 ವಿಕೆಟ್ ಪಡೆದು ಮಿಂಚಿದರು. ಬಾಂಗ್ಲಾದೇಶ ಪರ ಆರಂಭಿಕ ಲಿಟನ್ ದಾಸ್ 49 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 54 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ ಮತ್ತೊಂದು ಕಡೆ ಉತ್ತಮ ಬೆಂಬಲ ದೊರೆಯದೇ ನಿರಾಸೆಗೊಂಡರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ಪರ ರಹಮತುಲ್ಲಾ ಗುರ್ಬಾಜ್ 55 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 43 ರನ್ ಬಾರಿಸಿದರೆ, ಇಬ್ರಾಹಿಂ ಜರ್ದಾನ್ (18) ಜೊತೆ ಮೊದಲ ವಿಕೆಟ್ ಗೆ 59 ರನ್ ಪೇರಿಸಿ ಉತ್ತಮ ಆರಂಭ ಒದಗಿಸಿದರು.
ನಾಯಕ ರಶೀದ್ ಖಾನ್ ಕೊನೆಯಲ್ಲಿ 10 ಎಸೆತಗಳಲ್ಲಿ 3 ಸಿಕ್ಸರ್ ಸಹಾಯದಿಂದ 19 ರನ್ ಸಿಡಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.