ಭಾರತೀಯರು ಶಿಕ್ಷಣದಲ್ಲಿ ಕಳೆಯುವುದಕ್ಕಿಂತ ಎರಡು ಪಟ್ಟು ಹೆಚ್ಚು ಸಮಯವನ್ನು ಮದುವೆ ಸಮಾರಂಭದಲ್ಲಿ ಕಳೆಯುತ್ತಾರೆ ಎಂದು ಸಮೀಕ್ಷೆ ವರದಿಯೊಂದು ಹೇಳಿದೆ.
ಭಾರತದಲ್ಲಿನ ಮದುವೆಯ ಮಾರುಕಟ್ಟೆ 10.7 ಲಕ್ಷ ಕೋಟಿ ಮೌಲ್ಯ ಹೊಂದಿದೆ. ಅಮೆರಿಕದ ಮದುವೆ ಮಾರುಕಟ್ಟೆಗೆ ಹೋಲಿಸಿದರೆ ದುಪ್ಪಟ್ಟು ಆಗಿದೆ ಎಂದು ವರದಿ ಹೇಳಿದೆ.
ಇನ್ವೆಸ್ಟ್ ಮೆಂಟ್ ಬ್ಯಾಂಕಿಂಗ್ ಮತ್ತು ಕ್ಯಾಪಿಟಲ್ ಮಾರುಕಟ್ಟೆ ಸಂಸ್ಥೆಯಾದ ಜೆಫರೀಸ್ ಭಾರತದಲ್ಲಿನ ಮದುವೆ ಮಾರುಕಟ್ಟೆಯನ್ನು ವಿವಿಧ ದೇಶ ಹಾಗೂ ವ್ಯವಸ್ಥೆ ಜೊತೆ ಹೋಲಿಕೆ ಮಾಡಿ ವರದಿ ಬಿಡುಗಡೆ ಮಾಡಿದೆ.
ಭಾರತದಲ್ಲಿ ನಡೆಯುವ ಪ್ರತಿ ಮದುವೆಯ ಸರಾಸರಿ ವೆಚ್ಚ 12.5 ಲಕ್ಷ ರೂ.ಗಳಾಗಿದೆ. ಇದು ಪ್ರತಿಯೊಂದು ಮಗುವಿನ ಪ್ರಾಥಮಿಕದಿಂದ ಪದವಿವರೆಗಿನ ಶಿಕ್ಷಣ ವೆಚ್ಚಕ್ಕಿಂತ ದುಪ್ಪಟ್ಟು ಆಗಿದೆ.
ಭಾರತದ ಮದುವೆಗಳು ಅಮೆರಿಕದ ಮಾರುಕಟ್ಟೆಗಿಂತ ದುಪ್ಪಟ್ಟು ಆಗಿದ್ದರೂ ಚೀನಾಗೆ ಹೋಲಿಸಿದರೆ ಚಿಕ್ಕದು. ದೇಶದ ಜಿಡಿಪಿಗಿಂತ (2.4 ಲಕ್ಷ ರೂ.) ಮೂರು ಪಟ್ಟು ಅಂದರೆ 4 ಲಕ್ಷ ರೂ. ಮದುವೆ ವೆಚ್ಚವಾಗಿದೆ.
ಅದ್ಧೂರಿ ಮದುವೆಗಳಿಗೆ 20ರಿಂದ 30 ಲಕ್ಷ ರೂ. ವೆಚ್ಚವಾಗುತ್ತದೆ. ಅದರಲ್ಲೂ ಅತೀ ಗಣ್ಯರು ನಡೆಸುವ ಐಷಾರಾಮಿ ಮದುವೆ 1ರಿಂದ 100 ಕೋಟಿ ರೂ.ವರೆಗೂ ವೆಚ್ಚ ಮಾಡಲಾಗುತ್ತಿದೆ. ಭಾರತದಲ್ಲಿ ಮದುವೆ ಪ್ರತಿಷ್ಠೆಯ ವಿಷಯವಾಗಿದೆ ಎಂದು ವರದಿ ವಿವರಿಸಿದೆ.
ಭಾರತದಲ್ಲಿ ಚಿನ್ನಾಭರಣಗಳ ಮಾರಾಟದ ಅರ್ಧದಷ್ಟು ಮದುವೆಗಳ ಸಮಯದಲ್ಲಿ ಖರೀದಿಸಲಾಗುತ್ತದೆ. ಉಡುಪು ಖರೀದಿಗೆ ಶೇ.10ರಷ್ಟು ವೆಚ್ಚ ಮಾಡಲಾಗುತ್ತದೆ. ಅಡುಗೆಗೆ ಶೇ.20ರಷ್ಟು ಹಾಗೂ ಮೇಕಪ್ ಗಾಗಿ ಶೇ.15ರಷ್ಟು ವೆಚ್ಚ ಮಾಡಲಾಗುತ್ತದೆ ಎಂದು ವರದಿ ಹೇಳಿದೆ.