Sunday, September 29, 2024
Google search engine
Homeತಾಜಾ ಸುದ್ದಿಮೃಗಾಲಯಕ್ಕೆ ಭೇಟಿ ನೀಡುವವರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಣೆ: ಸಚಿವ ಈಶ್ವರ್ ಖಂಡ್ರೆ ಸೂಚನೆ

ಮೃಗಾಲಯಕ್ಕೆ ಭೇಟಿ ನೀಡುವವರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಣೆ: ಸಚಿವ ಈಶ್ವರ್ ಖಂಡ್ರೆ ಸೂಚನೆ

ರಾಜ್ಯದ ಮೃಗಾಲಯಗಳು ವನ್ಯಜೀವಿಗಳ ಪಾಲನೆಗೆ ಹೆಸರಾಗಿದ್ದು, ಇದು ಜ್ಞಾನಮಂದಿರವೂ ಆಗಬೇಕು. ಮೃಗಾಲಯಗಳಿಗೆ ಭೇಟಿ ನೀಡುವ ಸಂದರ್ಶಕರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡಿ ಪರಿಸರ ಪ್ರಜ್ಞೆ ಮೂಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.

ಬೆಂಗಳೂರು ಹೊರವಲಯ ಬನ್ನೇರುಘಟ್ಟದ ಜೈವಿಕ ಉದ್ಯಾನದಲ್ಲಿಂದು ದಕ್ಷಿಣ ಭಾರತದ ಮೊದಲ ಹಾಗೂ ದೇಶದ ಅತಿ ದೊಡ್ಡ ಚಿರತೆ ಸಫಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೈವಿಕ ಉದ್ಯಾನಕ್ಕೆ ಬರುವ ಜನರು ವನ್ಯ ಜೀವಿಗಳನ್ನು ನೋಡಿ ಸಂತೋಷ ಪಡುತ್ತಾರೆ. ಜೊತೆಗೆ ಅವರಿಗೆ ಇಲ್ಲಿರುವ ಪ್ರತಿಯೊಂದು ಪ್ರಬೇಧದ ವೃಕ್ಷಗಳ ಬಗ್ಗೆ ತಿಳಿಸಿ ಜನರು ಕನಿಷ್ಠ 10 ಪ್ರಬೇಧದ ವೃಕ್ಷ ಗುರುತಿಸುವಂತೆ ಅವರಲ್ಲಿ ಅರಿವು ಮೂಡಿಸಬೇಕು ಎಂದರು.

ಮೃಗಾಲಯಕ್ಕೆ ಬರುವ ಪ್ರತಿಯೊಬ್ಬರಿಗೂ ಪ್ರಾಣವಾಯು- ಆಮ್ಲಜನಕ ನೀಡುವ ವೃಕ್ಷಗಳ ಮಹತ್ವದ ಬಗ್ಗೆ ತಿಳಿಸಿ, ಅವರು ಮನೆಗೆ ತೆರಳುವಾಗ ಒಂದು ಸಸಿ ಖರೀದಿಸಿ ತೆಗೆದುಕೊಂಡು ಹೋಗಿ ತಮ್ಮ ಮನೆಯ ಮುಂದೆ ನೆಟ್ಟು, ಪೋಷಿಸುವಂತೆ ಪ್ರೇರೇಪಿಸಬೇಕು. ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡುವ ರೀತಿಯಲ್ಲೇ ಮೃಗಾಲಯಕ್ಕೆ ಬರುವ ಸಂದರ್ಶಕರಿಗೂ ರಿಯಾಯಿತಿ ದರದಲ್ಲಿ ಸಸಿಗಳನ್ನು ಪೂರೈಸಬೇಕು ಎಂದು ಸೂಚನೆ ನೀಡಿದರು.

ಆನೆ ಮರಿಗೆ ನಾಮಕರಣ:

ಬನ್ನೇರುಘಟ್ಟದಲ್ಲಿರುವ ವೇದಾ ಎಂಬ ಹೆಣ್ಣಾನೆ ಕಳೆದ ಜನವರಿ 26ರ ಗಣರಾಜ್ಯ ದಿನದಂದು ಗಂಡಾನೆ ಮರಿಗೆ ಜನ್ಮ ನೀಡಿದ್ದು, ಭಾರತ ಗಣತಂತ್ರದ ದಿನ ಹುಟ್ಟಿದ ಈ ಆನೆಗೆ ‘ಸ್ವರಾಜ್’ ಎಂದು ನಾಮಕರಣ ಮಾಡಲಾಯಿತು. ಈಶ್ವರ ಖಂಡ್ರೆ ಅವರು ಫಲಕ ಅನಾವರಣ ಮಾಡಿ ಆನೆಗೆ ಸ್ವರಾಜ್ ಎಂದು ಹೆಸರಿಟ್ಟರು.

ಆನೆ ಹಾಲುಣಿಸುವ ಕೇಂದ್ರದ ಉದ್ಘಾಟನೆ:

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 26 ಆನೆಗಳಿದ್ದು, ಇಲ್ಲಿ ವರ್ಷಕ್ಕೆ 2ರಿಂದ 3 ಮರಿಗಳ ಜನನವಾಗುತ್ತದೆ. ಈ ಆನೆ ಮರಿಗಳಿಗೆ ಹಾಲುಣಿಸುವ ಕೇಂದ್ರವನ್ನೂ ಇಂದು ಉದ್ಘಾಟಿಸಲಾಯಿತು. ಉದ್ಯಾನದಲ್ಲಿ ಜನಿಸುವ ಆನೆಮರಿಗಳ ಪೈಕಿ ಸುಮಾರು 3 ವರ್ಷದ ಮರಿಗಳನ್ನು ಹಾಲುಣಿಸಲು ತಾಯಿಯಿಂದ ಬೇರ್ಪಡಿಸಿ, ಮಾವುತರ ಜೊತೆ ಬಾಂಧವ್ಯ ಬೆಸೆಯಲು 10 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿರುವ ಹಾಲುಣಿಸುವ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ, ಅಲ್ಲಿ ಮಾವುತರು ಮತ್ತು ಕಾವಾಡಿಗಳು ಆನೆ ಮರಿಗಳಿಗೆ 24 ಗಂಟೆಯೂ ವಿಶೇಷ ಆರೈಕೆ ಮಾಡುತ್ತಾರೆ ಎಂದು ಈಶ್ವರ ಖಂಡ್ರೆ ಹೇಳಿದರು.

ಈ ಕೇಂದ್ರದಲ್ಲಿ ಆನೆ ಮರಿಗಳ ಮುಕ್ತ ಸಂಚಾರಕ್ಕಾಗಿ ಒಂದು ಸಣ್ಣ ಕ್ರಾಲ್ ಮತ್ತು ಮರಿಗಳ ಮೇಲೆ ನಿಗಾ ಇಡಲು ಅಸ್ತಿತ್ವದಲ್ಲಿರುವ ಆನೆ ಕಟ್ಟಡದ ಮೇಲೆ ಕಾವಾಡಿಗಳಿಗೆ ಒಂದು ಕೋಣೆಯನ್ನು ನಿರ್ಮಿಸಲಾಗಿದೆ. ಈ ಕೇಂದ್ರವನ್ನೂ ಇಂದು ಉದ್ಘಾಟಿಸಲಾಗಿದೆ ಎಂದರು.

ಚಿಟ್ಟೆ ಉದ್ಯಾನವನದಲ್ಲಿ ಶಿಶು ಆರೈಕೆ ಕೊಠಡಿ: ಬನ್ನೇರುಘಟ್ಟ ಉದ್ಯಾನಕ್ಕೆ ಬರುವ ಸಂದರ್ಶಕರ ಪೈಕಿ, ಮಹಿಳೆಯರು, ಹಾಲುಣಿಸುವ ತಾಯಂದಿರೂ ಇರುತ್ತಾರೆ. ಹೀಗಾಗಿ ಶಿಶು ಆರೈಕೆ ಕೋಣೆಯನ್ನು ಸಹ ಇಲ್ಲಿ ನಿರ್ಮಿಸಲಾಗಿದ್ದು, ಪುಟ್ಟ ಶಿಶುಗಳು, ಅಂಬೆಗಾಲಿಡುವ ಕಂದಮ್ಮಗಳು ಮತ್ತು ಚಿಕ್ಕ ಮಕ್ಕಳ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಚಿಟ್ಟೆ ಉದ್ಯಾನದಲ್ಲಿ ಶಿಶು ಆರೈಕೆ ಕೊಠಡಿ ನಿರ್ಮಿಸಲಾಗಿದ್ದು, ಇದನ್ನು ಇಂದು ಉದ್ಘಾಟಿಸಲಾಗಿದೆ. ಮುಂದಿನ ವರ್ಷದ ಡಿಸೆಂಬರ್ ಒಳಗೆ ಇನ್ನೂ ಎರಡು ಶಿಶು ಆರೈಕೆ ಕೊಠಡಿಗಳನ್ನು ಇಲ್ಲಿ ನಿರ್ಮಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.

ಸ್ಕೈವಾಕ್ ಗೆ ಭೂಮಿಪೂಜೆ: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸ್ಕೈವಾಕ್ ಮತ್ತು ಐದು ಪ್ರಾಣಿ ಆವರಣಗಳಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು. ಬನ್ನೇರುಘಟ್ಟ ಜೈವಿಕ ಉದ್ಯಾನ 1974 ರಿಂದ ಪ್ರವಾಸಿಗರಿಗೆ ವಿವಿಧ ಸೌಲಭ್ಯ ನೀಡಲಾಗುತ್ತಿದ್ದು, ಇದನ್ನು ಹೆಚ್ಚು ಆಕರ್ಷಣೀಯಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೃಗಾಲಯದಿಂದ ಚಿಟ್ಟೆ ಉದ್ಯಾನವನಕ್ಕೆ ಸಂಪರ್ಕವನ್ನು ಕಲ್ಪಿಸಲು ಸ್ಕೈ ವಾಕ್ ವಿನ್ಯಾಸಗೊಳಿಸಲಾಗಿದೆ ಈ ಸ್ಕೈವಾಕ್ ನಲ್ಲಿ ನಡಯುವ ಪ್ರವಾಸಿಗರಿಗೆ ಅರಣ್ಯ ದರ್ಶನವೂ ಆಗುತ್ತದೆ. ಹತ್ತಿರದಿಂದ ಪಕ್ಷಿಗಳನ್ನು ನೋಡಲು ಅವಕಾಶವೂ ಆಗುತ್ತದೆ.

ಎಮು ಮತ್ತು ರಿಯಾಗೆ 50 ಲಕ್ಷ ರೂ.ಗಳ ವೆಚ್ಚದಲ್ಲಿ ಹೊಸ ನೈಸರ್ಗಿಕ ಆವರಣ, 1.5 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಹಂಟಿಂಗ್ ಚೀತಾ ಆವರಣ, 1.5 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಹಮದ್ರಿಯಾಸ್ ಮತ್ತು ಆಲಿವ್ ಬಾಬೂನ್ ಆವರಣ ಮತ್ತು 1.5 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಭಾರತೀಯ ಬೂದು ತೋಳ ಆವರಣವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments