ಲೋಕಸಭಾ ಚುನಾವಣೆಯ ನಂತರ ಸತತವಾಗಿ ಏರಿಳಿತ ಕಾಣುತ್ತಿರುವ ಷೇರು ಮಾರುಕಟ್ಟೆ ಗುರುವಾರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿ ಹೊಸ ದಾಖಲೆ ಬರೆದಿದೆ.
ಗುರುವಾರ ಬೆಳಿಗ್ಗೆ ಷೇರು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಬ್ಯಾಂಕಿಂಗ್ ಸೇರಿದಂತೆ ಹಣಕಾಸು ಸಂಸ್ಥೆಗಳ ಷೇರುಗಳಲ್ಲಿ ಭಾರೀ ಇಳಿಕೆ ಕಂಡು ಬಂದಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಭಾರೀ ಚೇತರಿಕೆ ಕಂಡು ದಾಖಲೆ ಬರೆದಿದ್ದು, ಇನ್ನು ಕೆಲವು ದಿನಗಳ ಕಾಲ ಇದೇ ರೀತಿ ಏರಿಕೆ ಕಾಣಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸಾರ್ವಕಾಲಿಕ ದಾಖಲೆ ಮಟ್ಟ ಮುಟ್ಟಿದೆ. ಬ್ಯಾಂಕ್ ಗಳ ಷೇರು ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದರಿಂದ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 79,000 ಅಂಕಗಳ ಗಡಿ ದಾಟಿದರೆ, ನಿಫ್ಟಿ 24,000 ಗಡಿ ದಾಟಿ ಮುನ್ನುಗ್ಗುತ್ತಿದೆ.
ಪ್ರಸ್ತುತ ಗೂಳಿ ಓಟ ಗಮನಿಸಿದರೆ ಸೆನ್ಸೆಕ್ಸ್ 80 ಸಾವಿರ ಗಡಿ ದಾಟುವ ಸಾಧ್ಯತೆ ಇದೆ. ಬ್ಯಾಂಕಿಂಗ್ ಮತ್ತು ಟೆಲಿಕಮ್ಯುನಿಕೇಷನ್ ಕಂಪನಿಗಳಿಗೆ ಹೂಡಿಕೆದಾರರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಬಜಾಜ್, ರಿಲಾಯನ್ಸ್, ಎಚ್ ಡಿಎಫ್ ಸಿ ಬ್ಯಾಂಕ್ ಗಳ ಷೇರುಗಳಿಗೆ ಭಾರೀ ಬೇಡಿಕೆ ಕಂಡು ಬಂದಿದೆ.