ನೀಟ್ ಪರೀಕ್ಷಾ ಅಕ್ರಮಗಳ ಕುರಿತು ಪ್ರತಿಪಕ್ಷಗಳು ಮತ್ತು ಆಡಳಿತಾರೂಢ ಸದಸ್ಯರ ನಡುವೆ ಗದ್ಧಲ ಉಂಟಾಗಿದ್ದರಿಂದ ಉಭಯ ಸದನಗಳ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಗಿದೆ.
ಶುಕ್ರವಾರ ಕಲಾಪ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಲೋಕಸಭಾ ಮತ್ತು ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೂ ಮುಂದೂಡಲಾಗಿದೆ.
ಮಧ್ಯಾಹ್ನ 12 ಗಂಟೆಗೆ ಕಲಾಪ ಪುನರಾರಂಭಗೊಂಡಿದ್ದು, ಪ್ರತಿಪಕ್ಷಗಳು ನೀಟ್ ಪರೀಕ್ಷೆಯ ಅಕ್ರಮಗಳ ಕುರಿತು ಪ್ರಸ್ತಾಪಿಸಿ ಚರ್ಚೆಗೆ ಆಗ್ರಹಿಸಿದರು.
ಪ್ರತಿಪಕ್ಷಗಳು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದವು. ಆದರೆ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದಾಗ ಪ್ರತಿಪಕ್ಷಗಳು ಒಪ್ಪದೇ ಕೂಡಲೇ ಚರ್ಚೆಗೆ ತೆಗೆದುಕೊಳ್ಳುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ನೀಟ್ ಪರೀಕ್ಷಾ ಅಕ್ರಮ ಯುವಕರ ಭವಿಷ್ಯದ ಪ್ರಶ್ನೆಯಾಗಿದೆ. ಸರ್ವ ಪ್ರತಿಪಕ್ಷಗಳು ಈ ಬಗ್ಗೆ ಚರ್ಚೆ ನಡೆಸಲು ಒಮ್ಮತ ವ್ಯಕ್ತಪಡಿಸಿವೆ. ಆದ್ದರಿಂದ ಸ್ಪೀಕರ್ ಗಂಭೀರ ವಿಷಯದವಾದ ನೀಟ್ ಅಕ್ರಮಗಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು.