ಅಮೆರಿಕದ ಹೂಡಿಕೆದಾರರನ್ನೇ ಬೆಚ್ಚಿಬೀಳಿಸಿದ್ದ 8300 ಕೋಟಿ ರೂ. ಮೌಲ್ಯದ ವಂಚನೆ ಪ್ರಕರಣದಲ್ಲಿ ಭಾರತೀಯ ಮೂಲದ ಉದ್ಯಮಿಗೆ ಅಮೆರಿಕ ನ್ಯಾಯಾಲಯ 7.6 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಔಟ್ ಕಮ್ ಹೆಲ್ತ್ ಕಂಪನಿ ಮಾಲೀಕ, ಮಾಜಿ ಶತಕೋಟ್ಯಾಧಿಪತಿ ಭಾರತೀಯ ಮೂಲದ ಉದ್ಯಮಿ ರಿಷಿ ಶಾಹ್ ಗೆ ಅಮೆರಿಕದ ನ್ಯಾಯಾಲಯ ಏಳೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಗೋಲ್ಡ್ ಮನ್ ಸ್ಯಾಚಸ್, ಗೂಗಲ್ ಮಾತೃ ಸಂಸ್ಥೆಯಾದ ಆಲ್ಫಾಬೆಟ್ ಇಂಕ್, ಇಲಿಯನ್ಸ್ ಗವರ್ನರ್ ಸೇರಿದಂತೆ ಬೃಹತ್ ಕಂಪನಿಗಳ ಹೂಡಿಕೆದಾರರೇ ಈ ಬೃಹತ್ ವಂಚನೆ ಯೋಜನೆಗೆ ಬಲಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ದೊಡ್ಡ ಕಾರ್ಪರೇಟ್ ವಂಚನೆ ಪ್ರಕರಣ ಎಂದು ಅಮೆರಿಕದ ಜಿಲ್ಲಾ ನ್ಯಾಯಾಧೀಶ ಥಾಮಸ್ ಡರ್ಕಿನ್ ತೀರ್ಪಿನ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ಔಟ್ ಕಮ್ ಕಂಪನಿಯ ಮಾಸ್ಟರ್ ಮೈಂಡ್ ಆಗಿದ್ದ ರಿಷಿ ಶಾಹ್ 2006ರಲ್ಲಿ ಈ ಸಂಸ್ಥೆ ಸ್ಥಾಪಿಸಿದ್ದು, ವೈದ್ಯರನ್ನು ಟಿವಿಗಳಲ್ಲಿ ಸಂದರ್ಶಿಸುವ ಮೂಲಕ ಜಾಹಿರಾತು ನೀಡುವ ಹೊಸ ಜಾಹಿರಾತು ವಿಧಾನ ಜಾರಿಗೆ ತಂದಿದ್ದರು. ಈ ರೀತಿಯ ಜಾಹಿರಾತಿನ ಮೂಲಕ ರೋಗಿಗಳು ಮತ್ತು ವೈದ್ಯರ ನಡುವೆ ನೇರ ಸಂಪರ್ಕ ಸಾಧಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಈ ವಿಧಾನ ಹೊಸ ವಂಚನೆ ಪ್ರಕರಣಗಳಿಗೆ ನಾಂದಿ ಹಾಡಿತು.
2010ರ ವೇಳೆ ಅಮೆರಿಕದಲ್ಲಿ ವೈದ್ಯಲೋಕದ ಬೃಹತ್ ಕಂಪನಿಯಾಗಿ ಬೆಳೆದು ನಿಂತ ಔಟ್ ಕಮ್, ಆಸ್ಪತ್ರೆ, ವೈದ್ಯರು ಮತ್ತು ರೋಗಿಗಳ ಮೂಲಕವೂ ಹಣ ಸಂಗ್ರಹಿಸಲು ಆರಂಭಿಸಿತು. ಅಲ್ಲದೇ ಅತಿಯಾದ ಜಾಹಿರಾತು ಮತ್ತು ಅನಗತ್ಯ ಜಾಹಿರಾತುಗಳ ಮೂಲಕ ಕುಸಿತ ಕಾಣಲು ಆರಂಭಿಸಿತು.
ನಂತರ ಹಣದ ವಹಿವಾಟಿಗಾಗಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಆ ಮೂಲಕ ವಂಚನೆಗೆ ಇಳಿದ ಕಂಪನಿ ಸಹಸ್ರಾರು ರೋಗಿಗಳು, ಕಂಪನಿಗಳಿಗೆ ವಂಚಿಸಿತು ಎಂದು ಹೇಳಲಾಗಿದೆ.