ಅಭಿಮಾನ ಇರಬೇಕೇ ಹೊರತು ದುರಾಭಿಮಾನಿ ಇರಬಾರದು. ಹಾಗೆ ಅಭಿಮಾನ ಅತಿರೇಕಕ್ಕೆ ಹೋದರೆ ಎಷ್ಟು ಅಭಾಸ ಆಗುತ್ತದೆ ಎಂಬುದಕ್ಕೆ ನಟ ದರ್ಶನ್ ಅಭಿಮಾನಿಗಳು ಉದಾಹರಣೆ ಆಗಿರುವುದು ವಿಪರ್ಯಾಸ.
ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುವ ಬಿಳಿ ಬಟ್ಟೆ ಹಾಗೂ ಎದೆಯ ಮೇಲೆ ಕೈದಿ ನಂಬರ್ ಹಾಕಿಸಿದಂತೆ ಹೆತ್ತ ಮಗುವಿನ ಮೊದಲ ವರ್ಷದ ಜನ್ಮದಿನವನ್ನು ಅಭಿಮಾನಿಯೊಬ್ಬ ಆಚರಿಸಿದ್ದಾನೆ.
ಒಂದು ವರ್ಷದ ಮಗುವಿಗೆ ಖೈದಿ ನಂಬರ್, ಕೈ ಕೋಳ ಮಾದರಿ, ಖೈದಿಗಳ ರೀತಿ ಬಿಳಿ ಬಟ್ಟೆ ಹಾಕಿ ಹುಟ್ಟುಹಬ್ಬ ಆಚರಿಸಿದ್ದೂ ಅಲ್ಲದೇ ಆ ಬಟ್ಟೆಯಲ್ಲಿ ಫೋಟೊ ಶೂಟ್ ಮಾಡಿಸಿದ್ದಾನೆ.
ಹಿಂದೆಲ್ಲ ಮಕ್ಕಳಿಗೆ ಕೃಷ್ಣನ ವೇಷ, ಸ್ವಾಮಿ ವಿವೇಕಾನಂದರು ವೇಷ, ಅಂಬೇಡ್ಕರ್ ರಂತಹ ಗಣ್ಯ ವ್ಯಕ್ತಿಗಳ ರೀತಿಯ ಮಕ್ಕಳನ್ನು ಅಲಂಕರಿಸಿ ಹೆತ್ತವರು ಸಂಭ್ರಮಿಸುತ್ತಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಅನುಸರಿಸಿ ಸಂಭ್ರಮಿಸುತ್ತಿರುವುದು ಆಘಾತ ಮೂಡಿಸುವಂತದ್ದಾಗಿದೆ.
ನಟನ ಮೇಲಿನ ಹುಚ್ಚು ಅಭಿಮಾನಕ್ಕೆ ಅಭಿಮಾನಿಗಳಿಂದ ನಿತ್ಯ ಒಂದೊಂದು ಹೊಸ ಟ್ರೆಂಡ್ ಆಗಿದೆ. ಮಗುವಿಗೆ ಖೈದಿ ಪೊಟೋ ಶೂಟ್ ಮಾಡಿಸಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನಟ ದರ್ಶನ್ ಜೈಲಿನಲ್ಲಿದ್ದರೂ ಅವರ ಅಭಿಮಾನಿಗಳ ಅಭಿಮಾನ ಕಡಿಮೆ ಆಗಿಲ್ಲ. ಬದಲಾಗಿ ಅವರ ಕೈದಿ ನಂಬರ್ ಹಾಕಿಕೊಂಡು ಓಡಾಡುವುದು, ಬೈಕ್ ಹಿಂದೆ ಆ ಸಂಖ್ಯೆ ಹಾಕಿಸಿಕೊಳ್ಳುವುದು. ಕೈದಿ ಸಂಖ್ಯೆ ಸಿನಿಮಾ ತೆಗೆಯುವುದು ಈಗ ಟ್ರೆಂಡ್ ಆಗಿರುವುದು ವಿಪರ್ಯಾಸವೇ ಸರಿ.