ಚಂಡಮಾರುತದ ಅಬ್ಬರ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಟಿ-20 ವಿಶ್ವಕಪ್ ವಿಜೇತ ಭಾರತ ತಂಡ ಭಾರತಕ್ಕೆ ಮರಳುವುದು ಮತ್ತಷ್ಟು ದಿನ ತಡವಾಗಲಿದ್ದು, ನಾಳೆ ಸ್ವದೇಶಕ್ಕೆ ಮರಳುವ ಸಾಧ್ಯತೆ ಇದೆ.
ವೆಸ್ಟ್ ಇಂಡೀಸ್ ನಲ್ಲಿ ಎರಡನೇ ಬಾರಿ ಚಂಡಮಾರುತ ಅಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಪ್ರಯಾಣ ಆರಂಭಿಸಬೇಕಿದ್ದ ರೋಹಿತ್ ಪಡೆ ಇಂದು ಸಂಜೆ ಹೊರಡುವ ಸಾಧ್ಯತೆ ಇದ್ದು, ಗುರುವಾರ ಬೆಳಿಗ್ಗೆ ಭಾರತಕ್ಕೆ ಬಂದಿಳಿಯುವ ನಿರೀಕ್ಷೆ ಇದೆ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ ಗಳಿಂದ ಸೋಲಿಸಿದ ಭಾರತ ತಂಡ 17 ವರ್ಷಗಳ ನಂತರ ಟಿ-20 ವಿಶ್ವಕಪ್ ಗೆದ್ದು ಇತಿಹಾಸ ಬರೆದಿತ್ತು. ಅಲ್ಲದೇ ರೋಹಿತ್ ಶರ್ಮ ನಾಯಕತ್ವದಲ್ಲಿ ಒಲಿದ ಮೊದಲ ವಿಶ್ವಕಪ್ ಗೆಲುವು ಇದಾಗಿತ್ತು.
ಬಾರ್ಬಡಾಸ್ ನಲ್ಲಿಯೇ ಉಳಿದುಕೊಂಡಿರುವ ಭಾರತ ತಂಡದ ಆಟಗಾರರು ಬುಧವಾರ ಬೆಳಿಗ್ಗೆ ಪ್ರಯಾಣ ಆರಂಭಿಸಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಸಂಜೆ ಹೊರಡುವ ಸಾಧ್ಯತೆ ಇದ್ದು, ಗುರುವಾರ ಬೆಳಿಗ್ಗೆ ದೆಹಲಿಗೆ ಆಗಮಿಸುವ ನಿರೀಕ್ಷೆ ಇದೆ.
ಭಾರತ ತಂಡ ಸ್ವದೇಶಕ್ಕೆ ಮರಳಲು ತಡವಾಗಿದ್ದರಿಂದ ಜಿಂಬಾಬ್ವೆ ಪ್ರವಾಸಕ್ಕೆ ತೆರಳಬೇಕಿದ್ದ ಯುವ ಪಡೆ ಪ್ರವಾಸದಲ್ಲೂ ವಿಳಂಬವಾಗಿದ್ದು, ಬಿಸಿಸಿಐ ಹಲವಾರು ಬದಲಿ ಆಟಗಾರರನ್ನು ನೇಮಕ ಮಾಡುವಂತಾಗಿದೆ.
ವೆಸ್ಟ್ ಇಂಡೀಸ್ ನಿಂದ ಸ್ವದೇಶಕ್ಕೆ ತಡವಾಗಿ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಬರುತ್ತಿರುವುದರಿಂದ ಅವರ ಬದಲು ಸಾಯಿ ಸುದರ್ಶನ್, ಜಿತೇಶ್ ಶರ್ಮ ಮತ್ತು ಹರ್ಷತ್ ರಾಣಾ ಅವರನ್ನು ಆಯ್ಕೆ ಮಾಡಲಾಗಿದೆ.
ಜುಲೈ 6ರಿಂದ ಟಿ-20 ಹಾಗೂ ಏಕದಿನ ಸರಣಿಗೆ ಪಾಲ್ಗೊಳ್ಳಲು ಭಾರತ ತಂಡ ಶನಿವಾರ ಪ್ರಯಾಣ ಬೆಳೆಸಬೇಕಿತ್ತು. ಆದರೆ ತಂಡ ಸ್ವದೇಶಕ್ಕೆ ಮರಳಲು ತಡವಾದ ಕಾರಣ ಮಂಗಳವಾರ ಪ್ರಯಾಣ ಬೆಳೆಸಿದೆ.
ಟಿ-20 ವಿಶ್ವಕಪ್ ತಂಡದಲ್ಲಿ ಮೀಸಲು ಆಟಗಾರರಾಗಿದ್ದ ರಿಂಕು ಸಿಂಗ್, ಖಲೀಲ್ ಅಹ್ಮದ್ ಕೂಡ ಬಾರ್ಬ ಡಾಸ್ ನಲ್ಲೇ ಉಳಿದುಕೊಂಡಿದ್ದಾರೆ. ಇದರಿಂದ ಇವರಿಗೂ ಜಿಂಬಾಬ್ವೆ ಸರಣಿಗೆ ಪರಿಗಣಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅನಿವಾರ್ಯವಾಗಿ ಬಿಸಿಸಿಐ ಮೂವರು ಪರ್ಯಾಯ ಆಟಗಾರರನ್ನು ಆಯ್ಕೆ ಮಾಡಿದೆ.