ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಅಂತಿಮ ಫಲಿತಾಂಶ ಹೊರಬೀಳುವ ಮುನ್ನವೇ ಪ್ರಧಾನಿ ರಿಷಿ ಸುನಕ್ ಕನ್ಸರ್ವೆಟಿವ್ ಪಕ್ಷದ ಹೀನಾಯ ಸೋಲನ್ನು ಒಪ್ಪಿಕೊಂಡಿದ್ದು, ಸೋಲಿನ ಹೊಣೆ ಹೊರುವುದಾಗಿ ತಿಳಿಸಿದ್ದಾರೆ.
ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ 650 ಸ್ಥಾನಗಳಿಗೆ ಶುಕ್ರವಾರ ಮತದಾನವಾಗಿದ್ದು, ಶನಿವಾರ ಮತ ಎಣಿಕೆ ಪ್ರಗತಿಯಲ್ಲಿದೆ. 650 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷ 250ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಡಳಿತಾರೂಢ ಕನ್ಸರ್ವೆಟಿವ್ ಪಕ್ಷ ಎರಡಂಕಿಯನ್ನೂ ಗಳಿಸದೇ ಹೀನಾಯ ಸೋಲಿನತ್ತ ಮುಖ ಮಾಡಿದೆ.
ಕನ್ಸರ್ವೆಟಿವ್ ಪಕ್ಷ ಕಳೆದ 14 ವರ್ಷಗಳಿಂದ ಚುಕ್ಕಾಣಿ ಹಿಡಿದಿದ್ದು, ಸತತ 5ನೇ ಬಾರಿ ಗೆಲುವಿಗಾಗಿ ಹೋರಾಟ ನಡೆಸಿದೆ. ಆದರೆ ಪ್ರಧಾನಿ ಸ್ಥಾನ ಅಲಂಕರಿಸಿರುವ ಸುನಕ್ ತಮ್ಮದೇ ಯಾರ್ಕ್ ಶೈರ್ ಕ್ಷೇತ್ರವಾದ ರಿಚ್‌ಮಂಡ್ ಮತ್ತು ನಾರ್ಥಲ್ಟನ್ ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಸುನಕ್ 2019ರಲ್ಲಿ 27,000 ಮತಗಳ ಬಹುಮತದೊಂದಿಗೆ ಗೆಲುವು ಕಂಡಿದ್ದರು.
2019ರ ಕೊನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ಸ್ 365 ಸ್ಥಾನಗಳನ್ನು ಗೆದ್ದು 80 ಸ್ಥಾನಗಳ ಬಹುಮತವನ್ನು ಪಡೆದುಕೊಂಡಿತು. ಲೇಬರ್ 202 ಸ್ಥಾನಗಳನ್ನು, ಎಸ್ ಎನ್ ಪಿ 48, ಮತ್ತು ಲಿಬರಲ್ ಡೆಮೋಕ್ರಾಟ್ 11 ಸ್ಥಾನಗಳನ್ನು ಗೆದ್ದಿದೆ. ಈ ಬಾರಿ, 8 ವರ್ಷಗಳಲ್ಲಿ ಆಂತರಿಕ ಕಲಹ ಮತ್ತು ಐದು ವಿಭಿನ್ನ ಪ್ರಧಾನ ಮಂತ್ರಿಗಳಿಂದ ಗುರುತಿಸಲ್ಪಟ್ಟ ಅವಧಿಯ ನಂತರ ಟೋರಿಗಳು ಮತದಾರರ ಹಿನ್ನಡೆಯನ್ನು ಎದುರಿಸುತ್ತಿದ್ದಾರೆ.