ಬಹುಜನ ಸಮಾಜವಾದಿ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮಾಸ್ಟ್ರಾಂಗ್ ಅವರನ್ನು ಅವರ ನಿರ್ಮಾಣ ಹಂತದ ಮನೆಯ ಸಮೀಪವೇ ಹಾಡುಹಗಲೇ 6 ಜನ ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿದ್ದಾರೆ.
ಚೆನ್ನೈ ಸಮೀಪದ ಪೆರಂಬೂರ್ ಬಳಿಯ ಅವರ ನಿವಾಸಕ್ಕೆ ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಆರ್ಮಾಸ್ಟ್ರಾಂಗ್ ಅವರನ್ನು ಹತ್ಯೆಗೈದಿದ್ದಾರೆ.
ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆರ್ಮಸ್ಟ್ರಾಂಗ್ ಅವರನ್ನು ಕೂಡಲೇ ಆಸ್ಪತ್ರೆಗೆ ದಖಾಲಿಸಲಾಯಿತಾದರೂ ಅತೀವ ರಕ್ತಸ್ರಾವದಿಂದ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರ್ಮಾಸ್ಟ್ರಾಂಗ್ ಅವರ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಚೆನ್ನೈನಲ್ಲಿ ಮಹಾನಗರ ಪಾಲಿಕೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಆರ್ಮಸ್ಟ್ರಾಂಗ್ ನಂತರ ಪೆರಂಬೂರ್ ಗೆ ಮರಳಿ ಅಲ್ಲಿ ಜೀವನ ನಡೆಸುತ್ತಿದ್ದರು. ಪೆರಂಬೂರಿನಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕೆಲಸ ನೋಡಲು ಮನೆಯ ಬಳಿ ಬಂದಾಗ ದುಷ್ಕರ್ಮಿಗಳು ಹಲ್ಲೆ ಮಾಡಿ ಕೊಲೆಗೈದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.