ವಿಶ್ವವಿಖ್ಯಾತ ಒಡಿಶಾದ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ಉಂಟಾದ ದಟ್ಟಣೆಯಲ್ಲಿ ಒಬ್ಬ ವ್ಯಕ್ತಿ ಉಸಿರುಗಟ್ಟಿ ಮೃತಪಟ್ಟರೆ, ಹಲವಾರು ಭಕ್ತರು ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ವೇಳೆ ಉಂಟಾದ ನೂಕುನುಗ್ಗಲಿನಿದ ಸಂಭವಿಸಿದ ಕಾಲ್ತುಳಿದಲ್ಲಿ 121 ಮಂದಿ ಮೃತಪಟ್ಟಿದ್ದರು. ಈ ಘಟನೆ ಹಸಿರಾಗಿರುವಾಗಲೇ ಪುರಿ ಜಗನ್ನಾಥ ರಥಯಾತ್ರೆ ವೇಳೆ ಭಕ್ತರು ರಥ ಎಳೆಯಲು ಮುಗಿಬಿದ್ದಿದ್ದರಿಂದ ಭಕ್ತ ಮೃತಪಟ್ಟಿದ್ದು, ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಜಗನ್ನಾಥ ರಥಯಾತ್ರೆ ವೇಳೆ ಉಸಿರುಗಟ್ಟಿದ ವಾತಾವರಣದಿಂದ ಹಲವಾರು ಭಕ್ತರು ಅಸ್ವಸ್ಥಗೊಂಡಿರುವುದು, ಗಾಯಗೊಂಡಿರುವ ಪ್ರಕರಣಗಳು ವರದಿಯಾಗಿದ್ದು, ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
1971ರ ನಂತರ ಇದೇ ಮೊದಲ ಬಾರಿಗೆ ಎರಡು ದಿನಗಳ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸುಮಾರು 15 ಲಕ್ಷ ಭಕ್ತರು ಸೇರಿದ್ದರು. ರಥೋತ್ಸವ 3 ಕಿ.ಮೀ. ದೂರದವರೆಗೆ ರಥ ಸಾಗುವ ಕಾರ್ಯಕ್ರಮ ಇದ್ದು, ಭಕ್ತರು ರಥ ಎಳೆಯಲು ಮುಗಿಬಿದ್ದಿದ್ದರು.
ಇದಕ್ಕೂ ಮೊದಲು ರಾಷ್ಟ್ರಪತಿ ದ್ರೌಪದಿ ಮರ್ಮು ಮೂರು ದೇವರ ರಥಯಾತ್ರೆಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.