ಪೂಜಾ ವಸ್ತ್ರಾಕರ್ ಮಾರಕ ದಾಳಿ ಮತ್ತು ಸ್ಮೃತಿ ಮಂದಾನ ಅವರ ಅರ್ಧಶತಕದ ನೆರವಿನಿಂದ ಭಾರತ ವನಿತೆಯರ ತಂಡ 10 ವಿಕೆಟ್ ಗಳ ಭಾರೀ ಅಂತರದಿಂದ ದಕ್ಷಿಣ ಆಫ್ರಿಕಾ ವನಿತೆಯರನ್ನು ಮಣಿಸಿ 3 ಪಂದ್ಯಗಳ ಟಿ-20 ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.
ಚೆನ್ನೈನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವನ್ನು 17.1 ಓವರ್ ಗಳಲ್ಲಿ 84 ರನ್ ಗೆ ಆಲೌಟ್ ಮಾಡಿದ ಭಾರತ ತಂಡ ಸುಲಭ ಗುರಿಯನ್ನು 10.5 ಓವರ್ ಗಳಲ್ಲಿ ಸಾಧಿಸಿತು.
ದಕ್ಷಿಣ ಆಫ್ರಿಕಾ ತಂಡ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಎರಡನೇ ಪಂದ್ಯ ಮಳೆಯಿಂದ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಕನಿಷ್ಠ ಸಮಬಲ ಸಾಧಿಸಬೇಕಾದದರೆ ಭಾರತ ವನಿತೆಯರಿಗೆ ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡ ಎದುರಿಸಿತ್ತು.
ಭಾರತ ತಂಡದ ಪರ ಸ್ಮೃತಿ ಮಂದಾನ 40 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 54 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ಶೆಫಾಲಿ ವರ್ಮ 25 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 27 ರನ್ ಬಾರಿಸಿ ಅಜೇಯರಾಗಿ ಉಳಿದು 10 ವಿಕೆಟ್ ಗಳ ಜಯ ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಆಟಗಾರ್ತಿಯರು ಪೂಜಾ ವಸ್ತ್ರಾಕರ್ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿದರು. ಪೂಜಾ 4 ವಿಕೆಟ್ ಕಬಳಿಸಿದರೆ, ರಾಧಾ ಯಾದವ್ 3 ವಿಕೆಟ್ ಪಡೆದು ಮಿಂಚಿದರು.
ದಕ್ಷಿಣ ಆಫ್ರಿಕಾ ಪರ ಟಾಸ್ಮಿನ್ ಬರ್ಟ್ಸ್ (20), ಮರಿಜಾನೆ ಕ್ಯಾಪ್ (10) ಮತ್ತು ಅನ್ನೆಕೆ ಬೋಶ್ (17) ಎರಡಂಕಿಯ ಮೊತ್ತ ಗಳಿಸಿದರೆ ಉಳಿದವರು ಕಳಪೆ ಮೊತ್ತಕ್ಕೆ ಔಟಾದರು.