ನಾಯಕ ಶುಭಮನ್ ಗಿಲ್ ಕೊನೆಗೂ ಫಾರ್ಮ್ ಕೊಂಡುಕೊಳ್ಳುವ ಮೂಲಕ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಭಾರತ ತಂಡ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಜಿಂಬಾಬ್ವೆ ತಂಡಕ್ಕೆ 183 ರನ್ ಗಳ ಕಠಿಣ ಗುರಿ ಒಡ್ಡಿದೆ.
ಹರಾರೆಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಭಾರತ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 182 ರನ್ ಕಲೆ ಹಾಕಿತು.
ಶುಭಮನ್ ಗಿಲ್ ಮತ್ತು ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ ಗೆ 67 ರನ್ ಜೊತೆಯಾಟದಿಂದ ಉತ್ತಮ ಮೊತ್ತ ಪೇರಿಸಿದರು. ಜೈಸ್ವಾಲ್ 27 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿ ಔಟಾದರೆ, ಗಿಲ್ 49 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 66 ರನ್ ಗಳಿಸಿ ನಿರ್ಗಮಿಸಿದರು.
ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅಭಿಷೇಕ್ ಶರ್ಮ ಮೂರನೇ ಕ್ರಮಾಂಕದಲ್ಲಿ ಆಡಲಿಳಿದು (10) ವಿಫಲರಾದರು. ಋತುರಾಜ್ ಗಾಯಕ್ವಾಡ್ ಅಜೇಯ 49 ರನ್ ಗಳಿಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.