46 ವರ್ಷಗಳ ನಂತರ ತೆರೆಯಲಾದ ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರ ತೆರೆಯುವಾಗ ಕಾವಲಿಗೆ ಇದೆ ಎನ್ನಲಾಗುವ ಸರ್ಪ ಕಾಣಿಸಲಿಲ್ಲವಾ ಎಂದು ಒಡಿಶಾ ಹೈಕೋರ್ಟ್ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರವನ್ನು 46 ವರ್ಷಗಳ ನಂತರ ಭಾನುವಾರ ತೆರೆಯಲಾಯಿತು. ಈ ವೇಳೆ ದೇವಸ್ಥಾನದ ಸಮಿತಿ ಹಾಗೂ ಅರ್ಚಕರು ಸೇರಿದಂತೆ ನೇಮಿಸಿದ್ದ ಸಮಿತಿ ಸದಸ್ಯರು ರತ್ನ ಭಂಡಾರ ತೆರೆದರು.
ರತ್ನ ಭಂಡಾರ ರಕ್ಷಣೆಗೆ ಸರ್ಪ ಇದೆ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ಉರಗ ತಜ್ಞರ 2 ತಂಡಗಳನ್ನು ನೇಮಿಸಲಾಗಿತ್ತು. ಆದರೆ ರತ್ನ ಭಂಡಾರ ವೇಳೆ ಯಾವುದೇ ಹಾವು ಅಥವಾ ಸರ್ಪ ಕಾಣಿಸಿಕೊಂಡಿಲ್ಲ ಎಂದು ಹೇಳಲಾಯಿತು.
ಸೋಮವಾರ ದೇವಸ್ಥಾನದ ಒಳಗೆ ಇರುವ ರತ್ನ ಭಂಡಾರ ಬಳಿ ತಪಾಸಣೆಗೆ ಆಗಮಿಸಿದ ಒಡಿಶಾ ಹೈಕೋರ್ಟ್ ನ್ಯಾಯಾಧೀಶ ಬಿಸ್ವಂತ್ ರಥ್, ಇಲ್ಲಿ ಯಾವುದೂ ಹಾವು ಅಥವಾ ಸರ್ಪ ಇಲ್ಲವೇ ಎಂದು ಪ್ರಶ್ನಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರತ್ನ ಭಂಡಾರ ಕಾಯುತ್ತಿದ್ದ ಸರ್ಪಗಳು ಕಾಣಿಸಿಕೊಂಡಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು ದೇವಸ್ಥಾನದ ಪ್ರತೀತಿಗಳ ಬಗ್ಗೆ ನಾನು ಏನೂ ಹೇಳಲ್ಲ. ಅದು ನಮಗೆ ಸಂಬಂಧಿಸಿದ ವಿಷಯ ಅಲ್ಲ ಎಂದರು.
ಸಮಿತಿ ಸದಸ್ಯರು ಜಗನ್ನಾಥ ರಥಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ರತ್ನ ಭಂಡಾರದಲ್ಲಿರುವ ಆಭರಣಗಳನ್ನು ಪೂರ್ಣವಾಗಿ ಹೊರಗೆ ತೆಗೆದು ಲೆಕ್ಕ ಮಾಡಿಲ್ಲ. ಮುಂದೊಂದು ದಿನ ದಿನಾಂಕ ನಿಗದಿ ಮಾಡಿ ಆಭರಣಗಳ ಮಾಹಿತಿಗೆ ಸೂಚಿಸಲಾಗುವುದು ಎಂದು ಅವರು ಹೇಳಿದರು.