ಪಂಚೆ ಧರಿಸಿ ಬಂಧ ರೈತನಿಗೆ ಮಾಲ್ ಒಳಗೆ ಪ್ರವೇಶಿಸದಂತೆ ಸೆಕ್ಯೂರೆಟಿ ಗಾರ್ಡ್ ತಡೆದ ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಜಿಟಿ ಮಾಲ್ ಕ್ಷಮೆ ಕೋರಿದೆ.
ಸಿನಿಮಾ ನೋಡಲು ಕುಟುಂಬದ ಜೊತೆ ರೈತ ಫಕೀರಪ್ಪ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ಗೆ ಬಂದಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಪಂಚೆ ಧರಿಸಿ ಬಂದವರಿಗೆ ಮಾಲ್ ಒಳಗೆ ಪ್ರವೇಶಿಸಲು ಅನುಮತಿ ಇಲ್ಲ ಎಂದು ತಡೆದು ನಿಲ್ಲಿಸಿದ್ದಾರೆ.
ಮಾಲ್ ನಿಯಮದ ಪ್ರಕಾರ ಪಂಚೆ ಧರಿಸಿ ಒಳಗೆ ಬರುವಂತಿಲ್ಲ ಎಂದು ಸೆಕ್ಯೂರೆಟಿ ಗಾರ್ಡ್ ತಡೆದು ನಿಲ್ಲಿಸಿದ್ದು ಸುಮಾರು ಅರ್ಧ ಗಂಟೆ ಫಕೀರಪ್ಪ ಕಾದು ನಿಂತರೂ ಒಳಗೆ ಬಿಟ್ಟಿಲ್ಲ.
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಜಿಟಿ ಮಾಲ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಬುಧವಾರ ಬೆಳಿಗ್ಗೆ ಜಿಟಿ ಮಾಲ್ ಮುಂದೆ ಪ್ರತಿಭಟನೆ ನಡೆಸಿದರು. ಪಂಚೆ ನಮ್ಮ ರಾಜ್ಯದ ರೈತರ ಸಂಕೇತ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪಂಚೆ-ಶರ್ಟ್ ಹಾಕಿಕೊಂಡೇ ಬರ್ತಾರೆ ಅವರನ್ನು ಒಳಗೆ ಬಿಡುವುದಿಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದರು.
ಡಾ.ರಾಜ್ ಕುಮಾರ್ ಜೀವನುದ್ದದ್ದಕ್ಕೂ ಪಂಚೆ-ಶರ್ಟ್ ಹಾಕಿದ್ದರು. ಮಾಜಿ ಪ್ರಧಾನಿ ದೇವೇಗೌಡರು ಪಂಚೆಯಲ್ಲೇ ದೇಶ ಆಳಿದರು. ಅಂತಹ ಪಂಚೆ ಹಾಕಿದವರನ್ನು ಅಪಮಾನಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಎಚ್ಚೆತ್ತ ಮಾಲ್ ಉಸ್ತುವಾರಿ ಸುರೇಶ್, ಘಟನೆಗೆ ಕ್ಷಮೆಯಾಚಿಸಿದ್ದು, ನಾವು ಕೂಡ ರೈತರ ಮಕ್ಕಳೇ. ಮಾಲ್ ಒಳಗೆ ಪಂಚೆ ಧರಿಸಿ ಬರಬಾರದು ಎಂಬ ನಿಯಮ ಏನಿಲ್ಲ. ಸೆಕ್ಯೂರೆಟಿ ಗಾರ್ಡ್ ಹೊಸಬ. ಆತ ಗೊತ್ತೊ ಗೊತ್ತಿಲ್ಲದೆಯೇ ತಪ್ಪು ಮಾಡಿದ್ದಾನೆ. ಆತನ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈ ಘಟನೆಗೆ ಕ್ಷಮೆ ಕೋರುತ್ತೇವೆ ಎಂದು ಹೇಳಿದ್ದಾರೆ.