ಮುಂಬರುವ ಟಿ-20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಸದಸ್ಯರು ಹಾಗೂ ನೂತನ ಕೋಚ್ ಗೌತಮ್ ಗಂಭೀರ್ ಬುಧವಾರ ಆನ್ ಲೈನ್ ನಲ್ಲಿ ಸಭೆ ನಡೆಸಿದ್ದು, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬದಲು ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಅವರನ್ನು ನಾಯಕನನ್ನಾಗಿ ಆಯ್ಕೆ ನಿರ್ಧರಿಸಿದೆ ಎನ್ನಲಾಗಿದೆ.
2023ರ ಏಕದಿನ ವಿಶ್ವಕಪ್ ನಂತರ ಭಾರತ ತಂಡವನ್ನು 7 ಟಿ-20 ಪಂದ್ಯಗಳಲ್ಲಿ ಸೂರ್ಯಕುಮಾರ್ ತಂಡವನ್ನು ಮುನ್ನಡೆಸಿದ್ದರು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸರಣಿಯ 7 ಪಂದ್ಯಗಳಲ್ಲಿ 5ರಲ್ಲಿ ಜಯದತ್ತ ತಂಡವನ್ನು ಮುನ್ನಡೆಸಿದ್ದರು.
ಇತ್ತೀಚೆಗೆ ನಡೆದ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ 4-1ರಿಂದ ಗೆಲುವು ಸಾಧಿಸಿತ್ತು. ಹಾರ್ದಿಕ್ ಪಾಂಡ್ಯ ಅವರನ್ನು 2026ರ ಟಿ-20 ವಿಶ್ವಕಪ್ ವರೆಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲು ಬಿಸಿಸಿಐ ಉದ್ದೇಶಿಸಿತ್ತು. ಆದರೆ ಕೋಚ್ ಗಂಭೀರ್ ಹಾರ್ದಿಕ್ ಬದಲು ಸೂರ್ಯಕುಮಾರ್ ನಾಯಕತ್ವಕ್ಕೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಭಾರತ ತಂಡ ಜುಲೈ 27ರಂದು ಮೊದಲ ಟಿ-20 ಪಂದ್ಯ ಆಡಲಿದೆ. ಮೂರು ಪಂದ್ಯಗಳ ಟಿ-20 ಸರಣಿ ಮುಕ್ತಾಯದ ನಂತರ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ.
ಹಾರ್ದಿಕ್ ಪಾಂಡ್ಯ ಟಿ-20 ಸರಣಿಯಲ್ಲಿ ಆಡಲಿದ್ದು, ಏಕದಿನ ಸರಣಿಯಿಂದ ವಿಶ್ರಾಂತಿ ಬಯಸಿದ್ದಾರೆ ಎಂದು ಹೇಳಲಾಗಿದೆ. ಇದೇ ವೇಳೆ ರೋಹಿತ್ ಶರ್ಮ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯಲು ಬಯಸಿದ್ದಾರೆ ಎಂದು ಹೇಳಲಾಗಿದೆ.