ಅಮೆರಿಕದಲ್ಲಿ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ 20 ದಶಲಕ್ಷ ಡಾಲರ್ (167 ಕೋಟಿ ರೂ.) ನಷ್ಟವಾಗಿದೆ ಎಂದು ವರದಿ ಹೇಳಿದೆ.
ಶ್ರೀಲಂಕಾದ ಕೊಲೊಂಬೊದಲ್ಲಿ ಐಸಿಸಿ ವಾರ್ಷಿಕ ಸಾಮಾನ್ಯ ಸಭೆ ಶುಕ್ರವಾರ ನಡೆಯಲಿದ್ದು, ಸಭೆಯಲ್ಲಿ ಅತ್ಯಂತ ಜನಪ್ರಿಯ ಟಿ-20 ವಿಶ್ವಕಪ್ ಟೂರ್ನಿ ನಷ್ಟದ ಕುರಿತು ಚರ್ಚೆ ಆಗಲಿದೆ ಎಂದು ಪಿಟಿಐ ವರದಿ ಮಾಡಿದೆ.
ಐಸಿಸಿ ಸಭೆಯಲ್ಲಿ 9 ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ಇದರಲ್ಲಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ 20 ದಶಲಕ್ಷ ಡಾಲರ್ ನಷ್ಟವಾಗಿರುವುದು ಪ್ರಮುಖ ವಿಷಯವಾಗಿದೆ ಎಂದು ಹೇಳಲಾಗಿದೆ.
ಟೂರ್ನಿಯ ನಂತರದ ವರದಿಯನ್ನು ಸಿದ್ಧಪಡಿಸಲಾಗಿದ್ದು, ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆದ ಟೂರ್ನಿಯ ಪೈಕಿ ಅಮೆರಿಕದಲ್ಲಿ ನಡೆದ ಪಂದ್ಯಗಳಿಂದ ನಷ್ಟ ಉಂಟಾಗಿದೆ ಎಂದು ವರದಿ ಹೇಳಿದೆ ಎಂದು ಹೇಳಲಾಗಿದೆ.
ಅತ್ಯಂತ ಹೈವೋಲ್ಟೇಜ್ ಪಂದ್ಯ ಎಂದೇ ಹೇಳಲಾಗುವ ಪಾಕಿಸ್ತಾನ ಮತ್ತು ಭಾರತ ನಡುವಿನ ವಿಶ್ವಕಪ್ ಪಂದ್ಯ ಅಮೆರಿಕದಲ್ಲಿ ಆಯೋಜಿಸಲಾಗಿತ್ತು. ಪ್ರತಿಷ್ಠಿತ ಪಂದ್ಯಗಳ ಆತಿಥ್ಯದ ಹೊರತಾಗಿಯೂ ನಷ್ಟ ಉಂಟಾಗಲು ಕಾರಣ ಎಂದು ಸಭೆಯಲ್ಲಿ ವಿಶ್ಲೇಷಣೆ ನಡೆಯಲಿದೆ. ಇದೇ ವೇಳೆ ಸಭೆಯಲ್ಲಿ ಐಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.