ಸಾಮಾನ್ಯವಾಗಿ ತರಕಾರಿ ಹೆಚ್ಚುವಾಗ ಕಸ, ತರಕಾರಿಯ ಬಣ್ಣ ಸೇರಿಕೊಂಡು ಕೈ ಬಣ್ಣ ಬದಲಾಗುತ್ತದೆ. ಅದರಲ್ಲೂ ಕೆಲವು ತರಕಾರಿಗಳಂತೂ ಹೆಚ್ಚಿದ ನಂತರ ಕೈ ಕಪ್ಪಾಗಿ ಕಿರಿಕಿರಿ ಆಗುತ್ತದೆ.
ಕೈ ಕೆಂಪಾಗುವುದು ಅಥವಾ ಕಪ್ಪಾಗುವುದರಿಂದ ಆಗುವ ಕಿರಿಕಿರಿ ನೀರಿನಲ್ಲಿ ಅಥವಾ ಬಿಸಿ ನೀರಿನಲ್ಲಿ ತೊಳೆದರೂ ಹೋಗುವುದಲ್ಲ. ಕೆಲವು ದಿನಗಳ ಕಾಲ ಈ ಸಮಸ್ಯೆ ಕಾಡುತ್ತಿರುತ್ತದೆ.
ಸಾಮಾನ್ಯವಾಗಿ ಬಾಳೆಕಾಯಿ, ಬೀಟ್‌ರೂಟ್, ಸುವರ್ಣಗಡ್ಡೆ ಸೇರಿದಂತೆ ಕೆಲವೊಂದು ತರಕಾರಿಗಳನ್ನು ಕಟ್ ಮಾಡಿದರೆ ಕೈ ಕಪ್ಪಾಗುತ್ತದೆ. ನೀರು, ಸೋಪ್‌ಗಳಲ್ಲಿ ಎಷ್ಟೇ ತೊಳೆದರೂ ಒಂದೆರಡು ದಿನ ಕೈಗಳಲ್ಲಿದ್ದು ಕರಿಕಿರಿಯುಂಟು ಮಾಡುತ್ತದೆ. ಇದರಿಂದ ಪಾರಾಗಲು ಕೆಲವೊಂದು ಸಲಹೆಗಳು ಇಲ್ಲಿವೆ, ಅವುಗಳನ್ನು ಅನುಸರಿಸಿ.
ಬಾಳೆಕಾಯಿ ಹಚ್ಚಿದಾಗ ಕೈ ಕಪ್ಪಗಾಗುವುದರ ಜೊತೆಗೆ ಕೈ ಅಂಟಾಗುತ್ತದೆ. ಇದರಿಂದ ಕೈ ಅಸಹ್ಯವಾಗಿ ಕಾಣುತ್ತದೆ. ಕಪ್ಪು ಕಲೆಯ ಜೊತೆಗೆ ಬಾಳೆ ಕಾಯಿ ಅಂಟು ಕೂಡಾ ಹೋಗಲು ಹುಳಿಯಿರುವ ಮಜ್ಜಿಗೆ ಉಪಯೋಗಿಸಿ ನೋಡಿ..
ಬಾಳೆಕಾಯಿ ಹಚ್ಚಿದ ತಕ್ಷಣ ಸ್ವಲ್ಪ ಹುಳಿಯಿರುವ ಮಜ್ಜಿಗೆಯಲ್ಲಿ ಕೈ ಮತ್ತು ಹಚ್ಚಿದ ಚಾಕುವನ್ನು ಚೆನ್ನಾಗಿ ತೊಳೆದುಕೊಂಡರೆ ಕೈಗೆ ಅಂಟಿರುವ ಅಂಟಿನ ಜೊತೆಗೆ ಕಲೆಯೂ ಸಂಪೂರ್ಣ ಮಾಯವಾಗುತ್ತದೆ. ಮಜ್ಜಿಗೆಯಲ್ಲಿರುವ ಹುಳಿ ಅಂಶ ಕಲೆ ನಾಶಕವಾಗಿ ಕೆಲಸ ಮಾಡುತ್ತದೆ. ಇದು ಇತರ ತರಕಾರಿ ಕಟ್ ಮಾಡುವಾಗ ಕೈ ಕಪ್ಪಾಗುವ ಸಮಸ್ಯೆಯಿಂದ ನಿಮ್ಮನ್ನು ಪಾರು ಮಾಡುತ್ತದೆ.