ತಮಿಳಿನ ಖ್ಯಾತ ನಟ ಧನುಷ್ ಚೆನ್ನೈನಲ್ಲಿ 150 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅತ್ಯಂತ ಬಡ ಕುಟುಂಬದಲ್ಲಿ ಬಂದ ಧನುಷ್ ಗೆ ಇಷ್ಟು ದೊಡ್ಡ ಬಂಗಲೆ ಬೇಕಿತ್ತಾ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಚೆನ್ನೈನ ಪ್ರತಿಷ್ಠಿತ ಬಡಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ, ಮಾಜಿ ಅಳಿಯ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮನೆಗಳ ಸಮೀಪ ಧನುಷ್ ಹೊಸ ಬಂಗಲೆ ಖರೀದಿಸಿದ್ದಾರೆ.
ಧನುಷ್ ಖರೀದಿಸಿದ ಹೊಸ ಬಂಗಲೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಇಷ್ಟು ದೊಡ್ಡ ಮೊತ್ತದ ಐಷಾರಾಮಿ ಬಂಗಲೆ ಬೇಕಿತ್ತಾ ಎಂದು ಪ್ರಶ್ನಿಸತೊಡಗಿದ್ದಾರೆ.
ರಾಯನ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಧನುಷ್, ಪೊಯೆಸ್ ಗಾರ್ಡನ್ ನಲ್ಲಿ ನಾನು ಬಂಗಲೆ ಖರೀದಿಸಿದ್ದು ಚರ್ಚೆ ಮಾಡುವ ವಿಷಯವೇ ಎಂದು ಪ್ರಶ್ನಿಸಿದ್ದಾರೆ.
ಬಡ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ ಬಡತನದಲ್ಲೇ ಸಾಯಬೇಕಾ? ನಾನು ಸಂಪಾದನೆ ಮಾಡಿದ ಹಣದಲ್ಲಿ ಬಂಗಲೆ ಖರೀದಿಸದೇ ಸಣ್ಣ ಮನೆಯಲ್ಲೇ ಇರಬೇಕಿತ್ತಾ? ಯಾಕೆ ಈ ರೀತಿಯ ಚರ್ಚೆಗಳು ನಡೆಯುತ್ತವೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಧನುಷ್ ವಿಷಾದಿಸಿದ್ದಾರೆ.
ಪೊಯೆನ್ ಗಾರ್ಡನ್ ನಲ್ಲಿ ಮನೆ ಖರೀದಿಸಿದ್ದರ ಹಿಂದಿನ ಕಾರಣವನ್ನು ಹಂಚಿಕೊಂಡ ಅವರು, ನಾನು 16ನೇ ವಯಸ್ಸಿನಲ್ಲಿದ್ದಾಗ ಬೈಕ್ ನಲ್ಲಿ ಸ್ನೇಹಿತರ ಜೊತೆ ತಿರುಗಾಡುತ್ತಿದ್ದಾಗ ಪೊಸ್ ಗಾರ್ಡನ್ ಗೆ ಒಮ್ಮೆ ಬಂದಿದ್ದಾಗ ರಜನಿಕಾಂತ್ ಅವರ ಮನೆ ನೋಡಿ ಖುಷಿಯಾಗಿ ವಾಪಸ್ ಬರುತ್ತಿದ್ದೆ. ಅದೇ ದಾರಿಯಲ್ಲಿ ಮತ್ತೊಂದು ಮನೆ ಬಳಿ ಜನರು ಸಾಕಷ್ಟು ಸಂಖ್ಯೆಯಲ್ಲಿ ನಿಂತಿದ್ದರು. ಆಗ ಇದು ಯಾರ ಮನೆ ಎಂದು ಕೇಳಿದಾಗ ಜಯಲಲಿತಾ ಅವರದ್ದು ಎಂದು ಯಾರೋ ಹೇಳಿದರು. ಆಗ ನನಗೆ ವಿಚಿತ್ರ ಅನುಭವವಾಗಿ ಇಲ್ಲಿ ಮನೆ ಖರೀದಿಸಿದರೆ ಹೇಗೆ ಎಂಬ ಕನಸು ಹುಟ್ಟಿತು ಎಂದು ವಿವರಿಸಿದರು.