ಪರ್ವತಗಳ ನಾಡಾದ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಸಂಭವಿಸಿದ ಮೇಘ ಸ್ಫೋಟದಿಂದ 20 ಮಂದಿ ನಾಪತ್ತೆಯಾಗಿದ್ದಾರೆ.
ಪ್ರವಾಸಿತಾಣವಾದ ಶಿಮ್ಲಾದಿಂದ 150 ಕಿ.ಮೀ. ದೂರದ ರಾಂಪುರ ಜಿಲ್ಲೆಯ ಮಂಡಿಯಲ್ಲಿ ಹೈಡ್ರೊ ಎಲೆಕ್ಟ್ರಿಕ್ ಪವರ್ ಸ್ಥಾವರದ ಬಳಿ ಮೇಘಸ್ಫೋಟ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಹೆಲಿಕಾಫ್ಟರ್ ಮೂಲಕ ಭದ್ರತಾ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದಾರೆ.
ಡೆಪ್ಯುಟಿ ಕಮಿಷನರ್ ಅನುಪಮ್ ಕಶ್ಯಪ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಗಾಂಧಿ ನೇತೃತ್ವದಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ಪಡೆಗಳು ಘಟನಾ ಸ್ಥಳಕ್ಕೆ ದೌಡಾಯಿಸಿವೆ.
ಮೇಘಾಸ್ಫೋಟದಲ್ಲಿ 20 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಲಾಗಿದೆ. ಭಾರೀ ಮಳೆಯಿಂದ ರಸ್ತೆ ಸಂಪರ್ಕ ಕಡಿತವಾಗಿದೆ ಎಂದು ಅನುಪಮ್ ಕಶ್ಯಪ್ ತಿಳಿಸಿದ್ದಾರೆ.
ನೆರೆಯ ರಾಜ್ಯವಾದ ಉತ್ತರಾಖಂಡ್ ನಲ್ಲಿ ಮೇಘಸ್ಫೋಟ ಸಂಭವಿಸಿದ್ದರಿಂದ ಇಬ್ಬರು ಮೃತಪಟ್ಟಿದ್ದು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ.
ಗಾರ್ವಾಲ್ ಜಿಲ್ಲೆಯ ಜಕನ್ಯಾಳ್ಳಿಯಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಬಂದಿತ್ತು. ರಕ್ಷಣಾ ಪಡೆಗಳು 200 ಮೀ. ಆಳದಲ್ಲಿ ಆವಶೇಷಗಳಡಿ ವ್ಯಕ್ತಿಯನ್ನು ಜೀವಂತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.