ಒಲಿಂಪಿಕ್ಸ್ ಇತಿಹಾಸದಲ್ಲೇ ಅತ್ಯಂತ ರೋಚಕ 100 ಮೀ.ಓಟದ ಸ್ಪರ್ಧೆಯ ಫೈನಲ್ ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಸಾಕ್ಷಿಯಾಗಿದ್ದು, ಇಬ್ಬರು ಸ್ಪರ್ಧಿಗಳು 9.79 ಸೆಕೆಂಡ್ ನಲ್ಲಿ ಗುರಿ ಮುಟ್ಟಿದ್ದಾರೆ.
ಶನಿವಾರ ತಡರಾತ್ರಿ ನಡೆದ ರೋಚಕ ಹಣಾಹಣಿಯಲ್ಲಿ ವಿಶ್ವ ಚಾಂಪಿಯನ್ ಅಮೆರಿಕದ ನೊಹಾ ಲೈಲೆಸ್ ಮತ್ತು ಜಮೈಕಾದ ಕಿಶಾನೆ ಥಾಂಪ್ಸನ್ ಇಬ್ಬೂ 9.79 ಸೆಕೆಂಡ್ ಗಳಲ್ಲಿ ಏಕಕಾಲದಲ್ಲಿ ಗುರಿ ಮುಟ್ಟಿದರು.
ಸ್ಪರ್ಧೆಯ ವಿಜೇತರ ನಿರ್ಣಯಕ್ಕಾಗಿ ರೆಫರಿಗಳು ಫೋಟೊ ಫಿನಿಷ್ ಪರಿಶೀಲನೆಗೆ ಮುಂದಾದರು. ಈ ವೇಳೆ ಅಮೆರಿಕದ ನೊಹಾ ಲೈಲೆಸ್ ಫ್ರಾಕ್ಷನ್ ಆಫ್ ಸೆಕೆಂಡ್ (.784) ಮತ್ತು ಕಿಶಾನ್ ಥಾಂಪ್ಸನ್ (.789) ದಾಖಲು ಕಂಡು ಬಂದಿದ್ದು, ನೊಹಾ ಲೈಲೆಸ್ ಅವರಿಗೆ ಚಿನ್ನದ ಪದಕ ಘೋಷಿಸಲಾಯಿತು. ಈ ಮೂಲಕ 2004ರ ನಂತರ ಅಮೆರಿಕಕ್ಕೆ 100 ಮೀ. ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ.
ರೋಚಕ ಜಿದ್ದಾಜಿದ್ದಿನ ನಂತರ ಗೆಲುವು ಸಾಧಿಸಿದ್ದಕ್ಕೆ ಸಂಭ್ರಮ ವ್ಯಕ್ತಪಡಿಸಿದ ನೊಹಾ ಲೈಲೆಸ್, ಎಲ್ಲರೂ ಆರೋಗ್ಯವಂತರು, ಎಲ್ಲರೂ ಉತ್ತಮ ಸಿದ್ಧತೆಯೊಂದಿಗೆ ಬಂದಿದ್ದಾರೆ. ಆದರೆ ತೋಳಗಳ ಪೈಕಿ ನಾನೇ ದೊಡ್ಡ ತೋಳ ಎಂದು ನಿರೂಪಿಸಬೇಕಿತ್ತು. ನನಗೆ ಇದು ಬೇಕಿತ್ತು ಅದನ್ನು ಸಂಪಾದಿಸಿದ್ದಕ್ಕೆ ಸಂತಸವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.