ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಮತ್ತೆ ಸಂಭವಿಸಿದ ಭೂಕುಸಿತಗಳಿಂದ ಪ್ರವಾಹಜ ಪರಿಸ್ಥಿತಿ ನಿರ್ಮಾಣವಾಗಿದ್ದು, 128 ರಸ್ತೆಗಳು ಸಂಪರ್ಕ ಕಡಿತಗೊಂಡಿವೆ.
ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದೇ ರೀತಿಯ ಭಾರೀ ಮಳೆ ಆಗಸ್ಟ್ 16ರವರೆಗೆ ಮುಂದುವರಿಯಲಿದೆ ಎಂದು ಸ್ಥಳೀಯ ಹವಾಮಾನ ಇಲಾಖಾಧಿಕಾರಿ ಹೇಳಿದ್ದಾರೆ.
ಶುಕ್ರವಾರ ಹಿಮಾಚಲ ಪ್ರದೇಶದಲ್ಲಿ 168 ಮಿ.ಮೀ. ಮಳೆ ದಾಖಲಾಗಿದೆ. ಸಂಧೋಲೆಯಲ್ಲಿ 106.4 ಮಿ.ಮೀ. ನಗೊರ್ತಾ, ಸುರಿಯಾದಲ್ಲಿ 93.2 ಮಿ.ಮೀ., ದೌಲಕೂನ್ ನಲ್ಲಿ 67 ಮಿ.ಮೀ. ಮತ್ತು ಜುಬ್ಬೆರಹಟ್ಟಿಯಲ್ಲಿ 53 ಮಿ.ಮೀ. ಮಳೆ ದಾಖಲಾಗಿದೆ.
ಹಿಮಾಚಲ ಪ್ರದೇಶದಲ್ಲಿ 44 ವಿದ್ಯುತ್ ಮತ್ತು 67 ನೀರು ಸರಬರಾಜು ವ್ಯವಸ್ಥೆಗಳಿಗೆ ಹಾನಿಯಾಗಿವೆ. ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ದ್ವೀಪದಂತಾಗಿದೆ. ಮತ್ತೊಂದೆಡೆ 128 ರಸ್ತೆಗಳು ಸಂಪರ್ಕ ಕಡಿತಗೊಂಡಿವೆ.
ಕೆಲವು ದಿನಗಳ ಹಿಂದೆಯಷ್ಟೇ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತಗಳಿಂದ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. 842 ಕೋಟಿ ರೂ. ನಷ್ಟ ಉಂಟಾಗಿದೆ.