ಕೊನೆಯ ದಿನದವರೆಗೂ ನಡೆದ ಪೈಪೋಟಿಯಲ್ಲಿ ಚೀನಾವನ್ನು ಹಿಂದಿಕ್ಕಿದ ಅಮೆರಿಕ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ.
ಪ್ಯಾರಿಸ್ ಒಲಿಂಪಿಕ್ಸ್ ಗೆ ಭಾನುವಾರ ತೆರೆಬಿದ್ದಿದ್ದು, ಅಮೆರಿಕ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚು ಸೇರಿದಂತೆ 126 ಪದಕದೊಂದಿಗ ಅಗ್ರಸ್ಥಾನ ಪಡೆಯಿತು. ಅಲ್ಲದೇ ನೂರಕ್ಕೂ ಹೆಚ್ಚು ಪದಕ ಗೆದ್ದ ಏಕೈಕ ದೇಶ ಎಂಬ ಗೌರವಕ್ಕೆ ಪಾತ್ರವಾಯಿತು.
ಒಲಿಂಪಿಕ್ಸ್ ಕೊನೆಯ ದಿನ ನಡೆದ ಬಾಸ್ಕೆಟ್ ಬಾಲ್ ನಲ್ಲಿ ಅಮೆರಿಕ 67-66 ಅಂಕಗಳಿಂದ ಆತಿಥೇಯ ಫ್ರಾನ್ಸ್ ತಂಡವನ್ನು ಸೋಲಿಸಿ ಸತತ 8ನೇ ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ದಾಖಲೆ ಬರೆಯಿತು. ಈ ಮೂಲಕ 40 ಚಿನ್ನದ ಪದಕ ಗೆದ್ದು ಚೀನಾ ಜೊತೆ ಸಮಬಲ ಸಾಧಿಸಿದರೂ ಒಟ್ಟಾರೆ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನದ ಗೌರವ ತಂದುಕೊಟ್ಟಿತು.
ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಕೊನೆಯ ದಿನದವರೆಗೂ ಅಗ್ರಸ್ಥಾನ ಪಡೆದಿದ್ದ ಚೀನಾ 40 ಚಿನ್ನ 27 ಬೆಳ್ಳಿ, 24 ಕಂಚು ಸೇರಿದಂತೆ 91 ಪದಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿಯಿತು. ಜಪಾನ್ 20 ಚಿನ್ನ, 12 ಬೆಳ್ಳಿ, 13 ಕಂಚು ಒಳಗೊಂಡಂತೆ 45 ಪದಕಗಳೊಂದಿಗೆ 3ನೇ ಸ್ಥಾನ ಪಡೆಯಿತು.
ಆಸ್ಟ್ರೇಲಿಯಾ 18 ಚಿನ್ನ, 19 ಬೆಳ್ಳಿ ಹಾಗೂ 16 ಕಂಚು ಸೇರಿದಂತೆ 53 ಪದಕದೊಂದಿಗೆ 4ನೇ ಸ್ಥಾನ ಗಳಿಸಿದರೆ, ಆತಿಥೇಯ ಫ್ರಾನ್ಸ್ 16 ಚಿನ್ನ, 26 ಬೆಳ್ಳಿ ಹಾಗೂ 22 ಕಂಚು ಸೇರಿ 64 ಪದಕಗಳೊಂದಿಗೆ ಅಗ್ರ 5ನೇ ಸ್ಥಾನಕ್ಕೆ ತೃಪ್ತಿ ಪಡೆಯಿತು.
ನಿರಾಶಾದಾಯಕ ಪ್ರದರ್ಶನ ನೀಡಿದ ಭಾರತ ತಂಡ 1 ಬೆಳ್ಳಿ ಮತ್ತು 5 ಕಂಚು ಸೇರಿದಂತೆ 6 ಪದಕದೊಂದಿಗೆ 71ನೇ ಸ್ಥಾನಕ್ಕೆ ಕುಸಿಯಿತು. ಟೊಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ 10ನೇ ಸ್ಥಾನ ಪಡೆಯುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಗರಿಷ್ಠ ಸಾಧನೆ ಮಾಡಿತ್ತು.
ಜಾವೆಲಿನ್ ನಲ್ಲಿ ನೀರಜ್ ಚೊಪ್ರಾ ಚಿನ್ನದ ಪದಕ ಕೈತಪ್ಪಿದರೂ ಬೆಳ್ಳಿ ಗೆದ್ದಿದ್ದರಿಂದ ಭಾರತ ಕಳಪೆ ಸಾಧನೆಯಿಂದ ಪಾರಾಗಿದೆ. ಆದರೆ ನೆರೆಯ ಪಾಕಿಸ್ತಾನ ಕೇವಲ 1 ಚಿನ್ನದ ಪದಕ ಗೆದ್ದರೂ 62ನೇ ಸ್ಥಾನ ಪಡೆಯುವ ಮೂಲಕ ಭಾರತಕ್ಕಿಂತ 9 ಸ್ಥಾನ ಮೇಲೆ ಜಾಗ ಗಳಿಸಿದೆ.