ರಾಜ್ಯಪಾಲರು ನನ್ನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ನೀಡಿದರೆ ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ ಹೊರತು ಶಾಸಕರನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟು ದಿನ ಇಲ್ಲದ್ದು ಈಗ ಯಾಕೆ ಸರ್ಕಾರ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದೆ ಎಂದು ಪ್ರಶ್ನಿಸಿದರು.
ಅಕ್ರಮ ಗಣಿಗಾರಿಕೆಯಲ್ಲಿ 150 ಕೋಟಿ ರೂ. ಲಂಚ ಪಡೆದಿದ್ದೇನೆ ಎಂದು ಜನಾರ್ದನ ರೆಡ್ಡಿ ಮಾಡಿದ ಆರೋಪದಿಂದ ಈ ವಿಷಯ ಚರ್ಚೆಗೆ ಬಂದಿದೆ. 2007ರ ಆರೋಪದ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ತನಿಖೆಗೆ ನೀಡಿದ್ದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಬನ್ನಿ ಎಂದು ಕರೆದಿದ್ದೆ ಎಂದು ಅವರು ಹೇಳಿದರು.
ಲೋಕಾಯುಕ್ತರು ತನಿಖೆ ನಡೆಸಿ ನನ್ನ, ಎಸ್.ಎಂ. ಕೃಷ್ಣ ಮತ್ತು ಧರಂಸಿಂಗ್ ಹೆಸರು ಉಲ್ಲೇಖಿಸಿ ವರದಿ ನೀಡಿದ್ದಾರೆ. ಆದರೆ ಇದುವರೆಗೂ ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್ ಗೆ ಕೇಳದ ರಾಜ್ಯ ಸರ್ಕಾರ ಈಗ ಯಾಕೆ ಕೇಳಿದೆ ಎಂದು ಅವರು ಪ್ರಶ್ನಿಸಿದರು.
ಈ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವರ್ಗಾವಣೆ ದಂಧೆಗೆ ಮುಂದಾಗಿತ್ತು. ಇದನ್ನು ಖಂಡಿಸಿ ನಾನು ವ್ಯಾಪಕವಾಗಿ ದಾಳಿ ಮಾಡಿದ್ದಕ್ಕೆ ನನ್ನ ವಿರುದ್ಧ ಪ್ರಾಸಿಕ್ಯೂಷನ್ ಅಸ್ತ್ರ ಬಳಸಲಾಗಿದೆ. ಇದೇ ಸಿದ್ದರಾಮಯ್ಯ ಲೋಕಾಯುಕ್ತ ಅಧಿಕಾರ ಮೊಟಕುಗೊಳಿಸಿ ಎಸ್ ಐಟಿ ರಚನೆ ಮಾಡಿದ್ದರು. ಈಗ ಅದೇ ಲೋಕಾಯುಕ್ತ ವರದಿ ಆಧರಿಸಿ ಪ್ರಾಸಿಕ್ಯೂಷನ್ ಅಸ್ತ್ರ ಬಳಸಿದ್ದಾರೆ ಎಂದು ಅವರು ಆರೋಪಿಸಿದರು.
ಸಿದ್ದರಾಮಯ್ಯ ವಿರುದ್ಧ 60 ಕೇಸುಗಳಿವೆ. ಅದರಲ್ಲಿ 51 ಕೇಸುಗಳ ತನಿಖೆ ಬಾಕಿ ಇದೆ. ರಾಜ್ಯಪಾಲರು ಜೇಷ್ಠತೆ ಆಧಾರದ ಮೇಲೆ ತನಿಖೆಗೆ ಆದೇಶಿಸಿದ್ದಾರೆಯೇ ಹೊರತು ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಬೇಕು ಅಂತ ಅಲ್ಲ. ಆದರೆ ನನ್ನ ಮೇಲೆ ದ್ವೇಷ ಸಾಧನೆಗೆ ಎಸ್ ಐಟಿ ಮೂಲಕ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ ಎಂದು ಅವರು ಆರೋಪಿಸಿದರು.