ಫಾರ್ಮಾ ಕಂಪನಿಯಲ್ಲಿ ಸ್ಫೋಟ ಸಂಭವಿಸಿದ್ದರಿಂದ 17 ಮಂದಿ ಮೃತಪಟ್ಟಿದ್ದು, 41ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಶೇಷ ಆರ್ಥಿಕ ವಲಯ ಪ್ರದೇಶವಾದ ಅನಕಪಲ್ಲೆಯಲ್ಲಿ ಸಂಭವಿಸಿದೆ.
ವಿಶೇಷ ಆರ್ಥಿಕ ವಲಯ ಎಂದು ಘೋಷಿಸಲಾಗಿರುವ ಅಂಚುಪುರಂನಲ್ಲಿ ಎಸ್ಕೆಟಿನಾ ಕಂಪನಿಯ ಫಾರ್ಮಾ ಪ್ಲಾಂಟ್ ನಲ್ಲಿ ಬುಧವಾರ ಈ ದುರ್ಘಟನೆ ಸಂಭವಿಸಿದ್ದು, ಗಾಯಗೊಂಡವರನ್ನು ಎನ್ ಟಿಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಫ್ಲಾಂಟ್ ನಲ್ಲಿ 380 ಕಾರ್ಮಿಕರು ಎರಡು ಶಿಫ್ಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮೃತಪಟ್ಟವರಲ್ಲಿ ನಾಲ್ವರು ಕಾರ್ಮಿಕರು ಸೇರಿದ್ದಾರೆ. ಫ್ಲಾಂಟ್ ರಿಯಾಕ್ಟರ್ ಸ್ಫೋಟದಿಂದ ಈ ದುರ್ಘಟನೆ ಸಂಭವಿಸಿಲ್ಲ. ಬದಲಾಗಿ ನಿಜವಾದ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಊಟದ ಸಮಯದಲ್ಲಿ ಸ್ಫೋಟ ಸಂಭವಿಸಿದ ವೇಳೆ ಕಾರ್ಮಿಕರು ಹೊರಗೆ ಹೋಗಿದ್ದರು. ಇದರಿಂದ ಭಾರೀ ದುರಂತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ದು ನಾಳೆ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಘಟನಾ ಸ್ಥಳಕ್ಕೆ 6 ಅಗ್ನಿಶಾಮಕ ದಳದ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.