ತಮಿಳುನಾಡಿಗೆ ನಿಗದಿಗಿಂತ 100 ಟಿಎಂಸಿ ಹೆಚ್ಚು ನೀರು ಹರಿದು ಹೋಗಿದೆ. ಇದರಿಂದ ಕಾವೇರಿ ನದಿ ನೀರು ಪ್ರಾಧಿಕಾರ ಹೆಚ್ಚುವರಿಯಾಗಿ ಹರಿದ ನೀರನ್ನು ಮುಂದಿನ ತಿಂಗಳ ಲೆಕ್ಕಕ್ಕೆ ಜಮೆ ಮಾಡಿಕೊಳ್ಳುವಂತೆ ಸೂಚಿಸಿದೆ. ಇದರಿಂದ ಕರ್ನಾಟಕಕ್ಕೆ ಈ ವರ್ಷದ ಕಾವೇರಿ ಸಂಕಷ್ಟ ನೀಗಿದಂತಾಗಿದೆ.
ಕಳೆದ ವರ್ಷ ಬರಗಾಲದಿಂದ ಎರಡೂ ರಾಜ್ಯಗಳ ನಡುವೆ ಕಾವೇರಿ ನೀರಿಗಾಗಿ ತಿಕ್ಕಾಟ ನಡೆದಿತ್ತು. ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶದ ಹೊರತಾಗಿಯೂ ಕರ್ನಾಟಕ ನೀರು ಬಿಡದೇ ಅಲ್ಪಸ್ವಲ್ಪ ನೀರು ಉಳಿಸಿಕೊಂಡು ನಿಟ್ಟುಸಿರುಬಿಟ್ಟಿತ್ತು.
ಆದರೆ ಈ ವರ್ಷ ಆರಂಭದಲ್ಲಿ ಕೈಕೊಟ್ಟಿದ್ದ ಮುಂಗಾರು ಮಳೆ ನಂತರ ಭರ್ಜರಿಯಾಗಿ ಸುರಿದಿದ್ದರಿಂದ ಜುಲೈ ತಿಂಗಳಲ್ಲಿ ತಮಿಳುನಾಡಿಗೆ ಬಿಡಬೇಕಿದ್ದ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ನೀರುಹರಿದು ಹೋಗಿದೆ. ಈ ವಿಷಯವನ್ನು ಕರ್ನಾಟಕ ಗುರುವಾರ ನಡೆದ ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಮನವರಿಕೆ ಮಾಡಿಕೊಟ್ಟಿತು.
ಜುಲೈ ತಿಂಗಳಲ್ಲಿ ಕರ್ನಾಟಕ 71.56 ಟಿಎಂಸಿ ನೀರು ಬಿಡಬೇಕಿತ್ತು. ಆದರೆ ಕಾವೇರಿ ಕೊಳ್ಳದ ಜಲಾಶಯಗಳು ತುಂಬಿ ಹರಿದಿದ್ದರಿಂದ ತಮಿಳುನಾಡಿಗೆ 170 ಟಿಎಂಸಿ ನೀರು ಹರಿದು ಹೋಗಿದೆ. ಇದರಿಂದ ನಿಗದಿಗಿಂತ 100 ಟಿಎಂಸಿ ಹೆಚ್ಚು ನೀರು ಬಿಟ್ಟಂತಾಗಿದೆ.
ಕರ್ನಾಟಕದ ವಾದವನ್ನು ಪುರಸ್ಕರಿಸಿದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮುಂದಿನ ತಿಂಗಳಿಗೂ ಈ ನೀರಿನ ಲೆಕ್ಕವನ್ನು ಜಮೆ ಮಾಡಿಕೊಳ್ಳುವಂತೆ ಸೂಚಿಸಿದೆ. ಇದರಿಂದ ಈ ವರ್ಷದ ಕಾವೇರಿ ವಿವಾದ ಜುಲೈ ತಿಂಗಳಲ್ಲೇ ಇತ್ಯರ್ಥವಾದಂತಾಗಿದೆ.
ಕಳೆದ ಬಾರಿಯ ತೀವ್ರ ಬರದಿಂದಾಗಿ ನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೂಲಕ ಶಿಫಾರಸ್ಸು ಮಾಡಿಸಿತ್ತು. ರಾಜ್ಯದ ಡ್ಯಾಂಗಳು ತುಂಬದೇ ಇರುವಾಗಲೇ ನೀರು ಹರಿಸುವುದು ಹೇಗೆ ಎನ್ನವ ಚಿಂತೆಯಲ್ಲಿದ್ದ ಸರ್ಕಾರ ಸರ್ವಪಕ್ಷ ಸಭೆ ಕರೆದಿತ್ತು. ಸಭೆಯಲ್ಲಿ ನಿತ್ಯ 11,000 ಕ್ಯೂಸೆಕ್ ಬದಲು 8000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು..