ಅರಣ್ಯ ಇಲಾಖೆಯು ಒತ್ತುವರಿ ತೆರವುಗೊಳಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕೆಂದು ವಿಧಾನಪರಿಷತ್ ಸದಸ್ಯರಾದ ಬಿ ಕೆ ಹರಿಪ್ರಸಾದ್ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಒತ್ತಾಯಿಸಿದ್ದಾರೆ.
ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರ ಜೊತೆ ಫೋನ್ ನಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ವಿವಿಧ ಯೋಜನೆಗಳಿಗಾಗಿ ತಮ್ಮ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿರುವ ಕುಟುಂಬಗಳು ಹೆಚ್ಚಿವೆ. ಅರಣ್ಯ ಒತ್ತುವರಿ ತೆರವಿನಿಂದ ಈ ಕುಟುಂಬಗಳು ಬೀದಿ ಪಾಲಾಗಲಿವೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಶಿವಮೊಗ್ಗ, ಉತ್ತರ ಕನ್ನಡ, ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಹಲವಾರು ಜಿಲ್ಲೆಗಳಲ್ಲಿ ಆದಿವಾಸಿ ಹಾಗೂ ಬಡ ಕುಟುಂಬಗಳು ದಶಕಗಳಿಂದ ಕಾಡಿನಲ್ಲಿ ವಾಸವಾಗಿವೆ. ಈ ಕುಟುಂಬಗಳಿಗೆ ಇನ್ನೂ ಹಕ್ಕುಪತ್ರ ನೀಡಿಲ್ಲ. ಹೀಗಿರುವಾಗ ಅರಣ್ಯ ಒತ್ತುವರಿ ಮಾಡಿದರೆ ಈ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಹೇಳಿದ್ದಾರೆ.
ಅಲ್ಲದೇ ಒಂದು ಎಕರೆಗಿಂತ ಕಡಿಮೆ ಹಾಗೂ ದಶಕಗಳಿಂದ ಅರಣ್ಯವಾದಲ್ಲಿ ವಾಸವಾಗಿರುವ ಕುಟುಂಬ ಹಾಗೂ ಸಣ್ಣಪುಟ್ಟ ಅಂಗಡಿಗಳನ್ನು ತೆರವು ಮಾಡದೇ, ಪರಿಸರಕ್ಕೆ ಹಾನಿಯಾಗುವ ಬೃಹತ್ ರೆಸಾರ್ಟ್ ಹಾಗೂ ಉದ್ದಿಮೆಗಳನ್ನು ತೆರವುಗೊಳಿಸಿ ಎಂದು ಅವರು ಮನವಿ ಮಾಡಿದ್ದಾರೆ.