ಭಾರತೀಯ ಸೇನೆಯಿಂದ 98 ಲಕ್ಷ ರೂ. ಪರಿಹಾರ ಮೊತ್ತ ತಲುಪಿದೆ. ಈ ಹಣದಲ್ಲಿ ಮಗನ ಪ್ರತಿಮೆ ಸ್ಥಾಪಿಸುವುದಾಗಿ ಅಗ್ನಿವೀರ್ ಹುತಾತ್ಮ ಯೋಧನ ತಂದೆ ಹೇಳಿಕೆ ನೀಡಿದ್ದಾರೆ.
ಲೋಕಸಭೆಯಲ್ಲಿ ಕರ್ತವ್ಯ ನಿರತ ಅಗ್ನಿವೀರ್ ಯೋಧನ ಹುತಾತ್ಮ ಕುಟುಂಬಕ್ಕೆ ಪರಿಹಾರ ಮೊತ್ತ ನೀಡುವ ಬಗ್ಗೆ ಭಾರೀ ಚರ್ಚೆ ಆಗಿತ್ತು. ಕೇಂದ್ರ ಸರ್ಕಾರ ಪರಿಹಾರ ನೀಡಿದೆ ಎಂದು ವಾದಿಸಿದರೆ, ರಾಹುಲ್ ಗಾಂಧಿ ಹುತಾತ್ಮ ತಂದೆಯ ಹೇಳಿಕೆ ಆಧರಿಸಿ ಇನ್ನೂ ಕೊಟ್ಟಿಲ್ಲ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಭಾರತೀಯ ಸೇನೆ ಪರಿಹಾರ ಮೊತ್ತ ತಲುಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು.
ಹುತಾತ್ಮ ಅಗ್ನಿವೀರ್ ಯೋಧ ಅಜಯ್ ಕುಮಾರ್ ತಂದೆ ಚರಣ್ ಜೀತ್ ಸಿಂಗ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ನಮಗೆ ವಿಮೆಯ ಮೂಲಕ 50 ಲಕ್ಷ ಮೊದಲು ಬಂತು. ನಂತರ ಭಾರತೀಯ ಸೇನೆಯಿಂದ 48 ಲಕ್ಷ ರೂ. ಬಂದಿದೆ. ಅಂದರೆ ಒಟ್ಟಾರೆ 98 ಲಕ್ಷ ರೂ. ಕೈ ಸೇರಿದೆ. ಆದರೆ ಇನ್ನೂ 67 ಲಕ್ಷ ರೂ. ಬಾಕಿ ಇದ್ದು, ಇದು ಶೀಘ್ರದಲ್ಲೇ ತಲುಪಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ವಿವಿಧ ಭತ್ಯೆಗಳು ಸೇರಿದಂತೆ 67 ಲಕ್ಷ ರೂ. ಬರಬೇಕಿದೆ. ಅಗ್ನಿವೀರ್ ಯೋಜನೆಯ ಪ್ರಕಾರ ಒಟ್ಟಾರೆ 1.67 ಕೋಟಿ ರೂ. ಪರಿಹಾರ ಮೊತ್ತ ಬರಬೇಕಿದೆ. ಪೊಲೀಸ್ ತಪಾಸಣೆ ನಂತರ ಅಂತಿಮವಾಗಿ 67 ಲಕ್ಷ ರೂ. ಬರಲಿದೆ ಎಂದು ಚರಣ್ ಜೀತ್ ಸಿಂಗ್ ಹೇಳಿದರು.
ಇದೇ ವೇಳೆ ಹುತಾತ್ಮ ಮಗ ಕಳೆದುಕೊಂಡಿರುವ ನೋವು ನಮಗಿದೆ. ಹಣ ಮುಖ್ಯ ಅಲ್ಲ. ಮಗ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾನೆ ಎಂಬುದೇ ನಮಗೆ ಹೆಮ್ಮೆಯ ವಿಷಯ. ಪರಿಹಾರ ಮೊತ್ತದಲ್ಲಿ ಮಗನ ಪ್ರತಿಮೆ ಸ್ಥಾಪಿಸುವುದಾಗಿ ಅವರು ಹೇಳಿದರು.
ಇದೇ ವೇಳೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅಗ್ನಿವೀರ್ ಯೋಜನೆಯನ್ನು ಪ್ರಸ್ತಾಪಿಸಿರುವುದಕ್ಕೆ ಬೆಂಬಲ ವ್ಯಕ್ತಪಡಿಸಿದರು. ಅಗ್ನಿವೀರ್ ಯೋಜನೆಯಲ್ಲಿ ಕೆಲವು ವರ್ಷಗಳಿಗೆ ಮಾತ್ರ ಯಾಕೆ ಸೇವೆ ಸಲ್ಲಿಸಬೇಕು? ಪೂರ್ಣಾವಧಿ ಉದ್ಯೋಗ ಕೊಡಬಹುದಲ್ಲವೇ? ಎಂದು ಅವರು ಪ್ರಶ್ನಿಸಿದರು.