ಬಾಲಿವುಡ್ ಸಿನಿಮಾ ಫರ್ಜಿ ಚಿತ್ರದಿಂದ ಪ್ರೇರಣೆಗೊಂಡು ನಕಲಿ ನೋಟುಗಳನ್ನು ಮುದ್ರಿಸಿ ಸರಬರಾಜು ಮಾಡುತ್ತಿದ್ದ ಗ್ಯಾಂಗ್ ಅನ್ನು ಬೆಳಗಾವಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅನ್ವರ್ ಯಾದವಾಡ್, ಸದ್ದಾಂ ಯಾದಳ್ಳಿ, ರವಿ ಹ್ಯಾಗಡಿ, ದುಂಡಪ್ಪ ಒನಶೆನಾವಿ, ವಿಠ‍್ಠಲ್ ಹೊಸತೋಟಲ್ ಮತ್ತು ಮಲ್ಲಪ್ಪ ಕುಂಡಲಿ ಬಂಧಿತರು. ಇವರು 100 ಮತ್ತು 500 ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಸರಬರಾಜು ಮಾಡುತ್ತಿದ್ದರು.
ಗೋಕಾಕ್ ಪಟ್ಟಣದ ಬಳಿಯ ಕಡಬಹಟ್ಟಿ ಗುಡ್ಡ ಬಳಿ ಕಾರನ್ನು ತಪಾಸಣೆ ಮಾಡುವಾಗ ನಕಲಿ ನೋಟುಗಳು ಪತ್ತೆಯಾಗಿವೆ. ಕಾರಿನಲ್ಲಿ 100 ಮುಖಬೆಲೆಯ 305 ನೋಟುಗಳು ಹಾಗೂ 500 ಮುಖಬೆಲೆಯ 6750 ನಕಲಿ ನೋಟುಗಳು ಪತ್ತೆಯಾಗಿತ್ತು.
ಅರಬಾವಿ ಮತ್ತು ಮುದಲಗಿ ತಾಲೂಕುಗಳಲ್ಲಿ ಕಲರ್ ಪ್ರಿಂಟರ್ ಮೂಲಕ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು. ವೆಬ್ ಸರಣಿ ಫರ್ಜಿ ಚಿತ್ರಕ್ಕೂ ಇವರು ನಕಲಿ ನೋಟುಗಳ ಮುದ್ರಣಕ್ಕೂ ಹೊಂದಾಣಿಕೆ ಕಂಡು ವಿಚಾರಣೆ ನಡೆಸಿದಾಗ ಆ ಚಿತ್ರದ ಸ್ಫೂರ್ತಿಯಿಂದಲೇ ಈ ದಂಧೆಗೆ ಇಳಿದಿದ್ದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಕಲರ್ ಪ್ರಿಂಟರ್, ಪೇಂಟ್, ಪ್ರಿಟಿಂಗ್ ಪೇಪರ್, ಮೊಬೈಲ್ ಫೋನ್ ಸೇರಿದಂತೆ 5.25 ಲಕ್ಷ ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗೋಕಾಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.