ಮ್ಯಾಜಿಕ್ ಖಡ್ಗ ಎಂದೇ ಖ್ಯಾತಿ ಪಡೆದಿದ್ದ 1300 ವರ್ಷಗಳಿಂದ ಕಲ್ಲಿಗೆ ಅಂಟಿಕೊಂಡಿದ್ದ ಅತ್ಯಂತ ಮೊನಚಾದ ಖಡ್ಗ ನಾಪತ್ತೆಯಾಗಿದೆ.
ಹೌದು, ಫ್ರಾನ್ಸ್ ಇತಿಹಾಸದ ಧ್ಯೋತಕವಾಗಿದ್ದ ವಿಶ್ವದ ಅತ್ಯಂತ ಮೊನಚಾದ ಹಾಗೂ ಸದೃಢವಾಗಿದ್ದ 11ನೇ ಶತಮಾನದ ಖಡ್ಗ `ಮ್ಯಾಜಿಕ್ ಖಡ್ಗ’ ಎಂದೇ ಹೆಸರಾಗಿತ್ತು.
ನಿಜವಾದ ರಾಜ ಮಾತ್ರ ಕಲ್ಲಿನಿಂದ ಖಡ್ಗ ತೆಗೆಯಬಲ್ಲ ಎಂಬ ಪ್ರತೀತಿ ಇದ್ದು, ಫ್ರಾನ್ಸ್ ನ ಕಿಂಗ್ ಆರ್ಥರ್ ಗೆ ಸೇರಿದ ಖಡ್ಗ ಇದಾಗಿದೆ ಎಂದು ಹೇಳಲಾಗಿತ್ತು. 8ನೇ ಶತಮಾನದಲ್ಲಿ ದೇವತೆಗಳು ರೋಮನ್ ಕಿಂಗ್ ಚಾರ್ಲೆಮಂಗ್ನೆಗೆ ನೀಡಿದ್ದರು ಎಂಬ ಪುರಾಣದ ಕಥೆಗಳಿವೆ.
ಕಿಂಗ್ ಚಾರ್ಲೆಮಂಗ್ನೆ ತನ್ನ ಸೇನಾಪಡೆಯ ಶ್ರೇಷ್ಠ ಯೋಧನಾಗಿದ್ದ ರೊಲಾಂಡ್ ಗೆ ಖಡ್ಗವನ್ನು ಉಡುಗೊರೆಯಾಗಿ ನೀಡಿದ್ದ. ಯುದ್ಧದಲ್ಲಿ ಸೋಲುಂಡು ಸಾಯುವ ಮುನ್ನ ರೊಲಾಂಡ್ ಶತ್ರುಗಳ ಕೈಗೆ ಈ ಖಡ್ಗ ಸಿಗಬಾರದು ಎಂದು ನಾಶಪಡಿಸಲು ಯತ್ನಿಸಿದ. ಆದರೆ ಖಡ್ಗಕ್ಕೆ ಹಾನಿ ಮಾಡಲು ಆತನಿಂದ ಸಾಧ್ಯವಾಗಲಿಲ್ಲ.
ಖಡ್ಗ ನಾಶ ಮಾಡಲು ವಿಫಲವಾಗಿದ್ದರಿಂದ ರೊಲಾಂಡ್ ಯಾರಿಗೂ ಕಾಣದಷ್ಟು ದೂರಕ್ಕೆ ಎಸೆದಿದ್ದ. ಅದು ಕಲ್ಲು ಬಂಡೆಗೆ ಬಡಿದು ಅಲ್ಲಿಯೇ ಕಚ್ಚಿಕೊಂಡಿತ್ತು. ಸಾವಿರಾರು ವರ್ಷಗಳಾದರೂ ಆ ಖಡ್ಗವನ್ನು ಕಲ್ಲಿನಿಂದ ಬೇರ್ಪಡಿಸಲು ಆಗಿರಲಿಲ್ಲ.
ಭೂಮಿಯಿಂದ ಸುಮಾರು 100 ಅಡಿ ಆಳದಲ್ಲಿ ಇದ್ದ ಬೃಹತ್ ಬಂಡೆಯಲ್ಲಿ ಇದ್ದ ಈ ಖಡ್ಗವನ್ನು ದುಷ್ಕರ್ಮಿಗಳು ಕೊರೆದು ತೆಗೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ನಿಜವಾದ ಕಾರಣ ತಿಳಿಯಲು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ 100 ಅಡಿ ಆಳದಲ್ಲಿ ಇಳಿದು ಕಲ್ಲಿನಿಂದ ಖಡ್ಗವನ್ನು ಕಳ್ಳರು ಹೇಗೆ ಬೇರ್ಪಡಿಸಲು ಸಾಧ್ಯವಾಯಿತು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.